

ಶಿವಮೊಗ್ಗ: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಾಜಿ ಅಧ್ಯಕ್ಷರೂ ಒಳಗೊಂಡಂತೆ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಅಸಾಧಾರಣ ಸಾಧಕರ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗದ ಉಪ ಮುಖ್ಯ ಚುನಾವಣಾಧಿಕಾರಿ ಬಿ.ವಿ.ಲಕ್ಷ್ಮೇಶ್ವರ್ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಚುನಾವಣಾ ಸಂಬಂಧಿತ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹೊಸ ಮತದಾರರ ಗುರುತಿನ ಚೀಟಿಗಳನ್ನು ಸಕಾಲದಲ್ಲಿ ವಿತರಿಸಬೇಕು ಹಾಗೂ ಚುನಾವಣಾ ಕಾರ್ಯಗಳಿಗೆ ಬಿಡುಗಡೆಯಾಗಿರುವ ಅನುದಾನ ಬಳಸಿ ವರದಿ ನೀಡಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಅನೇಕ ಕಾರಣಗಳಿಗೆ ಮತದಾರರ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಅದಕ್ಕೆ ಸೂಕ್ತ ಕಾರಣ ಗುರುತಿಸಿ ಪಟ್ಟಿ ಸರಿಪಡಿಸಬೇಕು. ಅದಕ್ಕಾಗಿ ಪೂರಕ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ಕೆಲವು ಮತಗಟ್ಟೆಗಳಲ್ಲಿ ನಿಗದಿಪಡಿಸಿದ ಮತದಾರರಿಗಿಂತ ಹೆಚ್ಚು ಹೆಸರಿರುವುದು ಗಮನಕ್ಕೆ ಬಂದಿದೆ. ವಿವಾಹಿತರು, ಮರಣ ಹೊಂದಿದವರ ಹೆಸರನ್ನು ಕೈಬಿಟ್ಟು, ಆಕ್ಷೇಪಣೆಗಳಿಗೆ ಅವಕಾಶವಿಲ್ಲದಂತೆ ಮತದಾರರ ಪಟ್ಟಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಚುನಾವಣೆಯ ಜವಾಬ್ದಾರಿಯುತ ಹುದ್ದೆಗಳಲ್ಲಿದ್ದು ಕಾರ್ಯನಿರ್ವಹಿಸುತ್ತಿರುವವರು ಆಯೋಗವು ಪ್ರಕಟಿಸಿರುವ ಕೈಪಿಡಿ ಓದಿಕೊಂಡಿರಬೇಕು. ಚುನಾವಣೆಗೆ ಸಂಬಂಧಿಸಿದ ನಮೂನೆಗಳ ಅರಿವು ಚುನಾವಣಾಧಿಕಾರಿಗಳಿಗರಬೇಕು. ಕಾಲಕಾಲಕ್ಕೆ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ, ಮರಣ ಹೊಂದಿದವರ ಹೆಸರನ್ನು ಕೈಬಿಡಬೇಕು. ಕಾಲಕಾಲಕ್ಕೆ ಬೇಕಾಗುವ ಮಾಹಿತಿಗಾಗಿ ಮತಗಟ್ಟೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಅಗತ್ಯ ಎಂದು ಹೇಳಿದರು.
ಉಪ ಮುಖ್ಯ ಚುನಾವಣಾಧಿಕಾರಿ ಎಚ್.ಎಸ್.ದಿನೇಶ್‌ಚಂದ್ರ, ಚುನಾವಣಾ ತಹಶೀಲ್ದಾರ್ ನಾಗರಾಜ್ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಚುನಾವಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.