ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಂದ ಸಮರ್ಥ ನಿರ್ವಹಣೆ

21 skp 2
ಶಿಕಾರಿಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಉದ್ಘಾಟಿಸಿದರು. ಸ್ನೇಹಕ್ಕ, ಕಾಂಚನಾ ಕುಮಾರ್, ಆಶಾ, ರಾಜೇಶ್ವರಿ ಇತರರಿದ್ದರು.
Published on

ಶಿಕಾರಿಪುರ: ಮಹಿಳೆಯರು ಎಲ್ಲ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಸಹನೆ, ಸಂಯಮ, ಸಂಕಲ್ಪದ ಸಾಕ್ಷಿರೂಪವೇ ಹೆಣ್ಣು ಎಂದು ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಜನರಲ್ಲಿ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಹಾಗೂ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿರುವುದು ಅಭಿನಂದನೀಯ ಸಂಗತಿ ಎಂದು ತಿಳಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಕುಟುಂಬ ನಿರ್ವಹಣೆ ಜತೆಯಲ್ಲಿ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸ್ತ್ರೀಯರಿಗೆ ವಿಶೇಷ ಸ್ಥಾನ ನೀಡಿರುವ ದೇಶ ಭಾರತ ಎಂದರು. ಸುಷ್ಮಾ ದೀಕ್ಷಿತ್ ಮಾತನಾಡಿ, ಧ್ಯಾನದಿಂದ ನನ್ನ ಅನಾರೋಗ್ಯ ದೂರವಾಗಿ ನಾನು ಆರೋಗ್ಯವಾಗಿದ್ದೇನೆ. ಅನೇಕರಿಗೆ ಭರತನಾಟ್ಯ ಕಲಿಸುವುದರ ಜತೆ ಧ್ಯಾನ ಮತ್ತು ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ಹೇಳಿದರು.

ಪ್ರಗತಿಪರ ಮಹಿಳೆ ಆಶಾ ಉಮೇಶ್ ಮಾತನಾಡಿ, ಸಂಸ್ಥೆಯಲ್ಲಿ ಕಲಿಸುವ ಜ್ಞಾನ ಮತ್ತು ಧ್ಯಾನ ನನ್ನ ಸಾಧನೆಗೆ ಕಾರಣವಾಗಿದೆ ಎಂದರು. ಕದಳಿ ವೇದಿಕೆ ಅಧ್ಯಕ್ಷೆ ಕಾಂಚನಾ ಕುಮಾರ್ ಮಾತನಾಡಿ ಮನೆ, ಸಮಾಜವನ್ನು ಉತ್ತಮ ಸ್ಥಿತಿಗೆ ತರಲು ಮಹಿಳೆ ಪ್ರಮುಖ ಕಾರಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ರಾಜೇಶ್ವರಿ, ವಿಜಯಲಕ್ಷ್ಮೀ ನಾಡಿಗ್, ಸಾವಿತ್ರಿ, ವಿಜಯಾ ಪ್ರಕಾಶ್, ಲತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net