ಶಿಕ್ಷಣದಿಂದ ಸಕಾರಾತ್ಮಕ ಚಿಂತನೆ: ನಟಿ ಆಶಾ ಭಟ್ ಪ್ರತಿಪಾದನೆ

asha bhat
Published on

ಶಿವಮೊಗ್ಗ: ಶಿಕ್ಷಣ ಎಲ್ಲರಿಗೂ ವಿಶಿಷ್ಟ ನಿಲುವು ನೀಡುತ್ತದೆ. ಸಕಾರಾತ್ಮಕ ಚಿಂತನೆ ಬೆಳೆಸುತ್ತದೆ. ಮೌಲ್ಯಧಾರಿತ ಶಿಕ್ಷಣ, ದೈಹಿಕ ಶಿಕ್ಷಣದ ಬಗ್ಗೆಯೂ ವಿವೇಕಾನಂದರು ಅನೇಕ ವಿಚಾರಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅದರಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕೆಂದು ಚಲನಚಿತ್ರ ನಟಿ ಆಶಾ ಭಟ್ ಹೇಳಿದರು.

ನಗರದ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮೂರು ದಿನಗಳ ಡಿವಿಎಸ್ ಆವಿಷ್ಕಾರ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರಾಗಿದ್ದಾರೆ ಎಂದರು.

ಶಿಕ್ಷಣದ ಮೂಲಕ ವ್ಯಕ್ತಿತ್ವ ಹಾಗೂ ಚಾರಿತ್ರೃದ ನಿರ್ಮಾಣ ಸಾಧ್ಯ. ಓದುವ ಜತೆಗೆ ನಮ್ಮ ಆಸಕ್ತಿಯನ್ನು ಗುರುತಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ನಾವು ಯಾವುದನ್ನು ಪ್ರೀತಿಸುತ್ತೇವೋ ಅದನ್ನೇ ಮಾಡಬೇಕು. ಮಾಡುವುದನ್ನು ಪ್ರೀತಿಸಬೇಕು. ಆಗ ಮಾತ್ರ ಸಂತೋಷ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು. ನಾವು ಸಣ್ಣ ಊರಿನಿಂದ, ಹಳ್ಳಿಯಿಂದ ಬಂದವರು ಎಂಬ ಕೀಳರಿಮೆ ಬೇಡ. ನಿಮ್ಮ ಸಾಧನೆಗೆ ಸೀಮೆಯ ಮಿತಿಯಿಲ್ಲ. ನಾನು 10 ವರ್ಷಗಳ ಹಿಂದೆಯೇ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದೆ. ಈಗ ಕಾಲ ಬದಲಾಗಿದೆ. ಅವಕಾಶಗಳು ಹೇರಳವಾಗಿವೆ ಎಂದು ಹೇಳಿದರು.

ವ್ಯವಸ್ಥೆ ಡಿಜಟಲೀಕರಣಗೊಂಡಿದೆ. ನಿಮ್ಮ ಪ್ರತಿಭೆಯನ್ನು ತಲುಪಿಸುವ ವ್ಯವಸ್ಥೆ ಬೇಕಾದಷ್ಟಿವೆ. ಇದನ್ನು ಬಳಸಿಕೊಂಡು ಆಸಕ್ತಿಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ತೋರಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net