ಧಾರ್ಮಿಕ ಆಚರಣೆ ಮರೆಯದಿರಿ

2 skp 1
ಶಿಕಾರಿಪುರದ ಬೇಗೂರಿನಲ್ಲಿ ಆಯೋಜಿಸಿದ್ದ ಬನ್ನಿ ಉತ್ಸವದಲ್ಲಿ ತಹಸೀಲ್ದಾರ್ ಮಂಜುಳಾ ಭಜಂತ್ರಿ, ಶಾಸಕ ಬಿ.ವೈ.ವಿಜಯೇಂದ್ರ ಇತರರಿದ್ದರು.
Published on

ಶಿಕಾರಿಪುರ: ವಿಜಯದಶಮಿ ಪ್ರಯುಕ್ತ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಸೀತಾ-ಲಕ್ಷ್ಮಣ- ವರದಾಂಜನೇಯ ಸಹಿತ ಶ್ರೀರಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಹುಚ್ಚರಾಯಸ್ವಾಮಿ, ಶಿರಸಿ ಮಾರಮ್ಮ, ಗಿಡ್ಡಯ್ಯ ಸ್ವಾಮಿ, ಹುಲಿಕಟ್ಟೆಪ್ಪ ಸ್ವಾಮಿ, ಬೇಗೂರು ಆಂಜನೇಯ ಸ್ವಾಮಿ, ಆಪಿನಕಟ್ಟೆ ಕೊನೆಬಸವೇಶ್ವರ ಸ್ವಾಮಿ, ಬಾಳೆಕೊಪ್ಪ ಶ್ರೀ ಬಸವೇಶ್ವರ ಸ್ವಾಮಿ, ಬೇಗೂರು ಹನುಮಂತ ದೇವರು, ಬೇಗೂರು ತಾಂಡಾದ ಮಾರಿಕಾಂಬಾ, ದುರ್ಗಮ್ಮ ದೇವಿ ಸೇರಿ ಹಲವು ದೇವರುಗಳ ಮೂರ್ತಿಗಳನ್ನು ಮಂಗಳ ವಾದ್ಯಗಳೊಡನೆ ಬೇಗೂರು ಮರಡಿ ತಾಂಡಾ ತಲುಪಿದ ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬನ್ನಿ ಮುಡಿಯಲಾಯಿತು.

ಸಾಂಪ್ರದಾಯಿಕ ಉಡುಪು ಧರಿಸಿ ತಾಲೂಕು ದಂಡಾಧಿಕಾರಿ ಮಂಜುಳಾ ಭಜಂತ್ರಿ ಅಂಬು ಛೇದನ ಮಾಡಿದರು. ಶಾಸಕ ಬಿ.ವೈ.ವಿಜಯೇಂದ್ರ, ಬೇಗೂರು ಗ್ರಾಪಂ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಧಾರ್ಮಿಕ ಕಾರ್ಯಗಳ ಆಚರಣೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಸಮೀಪದ ಬೇಗೂರು ಮರಡಿಯಲ್ಲಿ ತಾಲೂಕು ಆಡಳಿತ, ಬೇಗೂರು ಗ್ರಾಪಂ ಆಯೋಜಿಸಿದ್ದ ಬನ್ನಿ ಮುಡಿಯುವ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಯಾವ ಕಾರಣಕ್ಕೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು. ಬೇಗೂರು ಮರಡಿಯಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಲು ಮತ್ತು ಸಹಸ್ರಾರು ಭಕ್ತರು ಬನ್ನಿ ಮುಡಿಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದರು.

ತಹಸೀಲ್ದಾರ್ ಮಂಜುಳಾ ಭಜಂತ್ರಿ, ಬೇಗೂರು ಗ್ರಾಪಂ ಅಧ್ಯಕ್ಷೆ ರೂಪಾ ಮಹೇಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಚನ್ನವೀರಪ್ಪ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ವೀರನ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net