

ಸಾಗರ: ನವರಾತ್ರಿ ಸಂದರ್ಭ ನಡೆಯುವ ವಿಶೇಷ ಧಾರ್ಮಿಕ ಆಚರಣೆಯು ಮನುಷ್ಯನಲ್ಲಿ ಆತ್ಮಶಕ್ತಿ ವೃದ್ಧಿಸುವಂತೆ ಮಾಡುತ್ತದೆ ಎಂದು ಕೆಳದಿ ರಾಜಗುರು ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೆಳದಿ ಬಂದಗದ್ದೆ ರಾಜಗುರು ಹಿರೇಮಠದಲ್ಲಿ ಗುರುವಾರ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ಪಚ್ಚೆಲಿಂಗ ದರ್ಶನ ಮತ್ತು ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಠ, ಮಂದಿರಗಳು ಧಾರ್ಮಿಕ ಭಾವನೆ ಬಿತ್ತುವ ಶ್ರದ್ಧಾಕೇಂದ್ರಗಳು. ಅವುಗಳಿಗೆ ಪುರಾತನ ಪರಂಪರೆ ಇದೆ. ಯುವ ಸಮೂಹ ಧಾರ್ಮಿಕ ಪರಂಪರೆ, ಸಂಸ್ಕೃತಿಯ ಅಧ್ಯಯನದತ್ತ ಗಮನ ಹರಿಸಬೇಕು. ದುಡಿಮೆ ನಡುವೆ ಗುರುಹಿರಿಯರು, ಮಠ ಮಂದಿರಗಳ ಬಗ್ಗೆ ಶ್ರದ್ಧಾಭಕ್ತಿ ಹೊಂದಿರಬೇಕು. ಕೆಳದಿ ಅರಸರ ಕಾಲದಿಂದಲೂ ರಾಜಗುರು ಹಿರೇಮಠ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪ್ರಸರಿಸುವ ಕೆಲಸ ಮಾಡುತ್ತಿದೆ ಎಂದರು.
ಕೆಳದಿ ಅರಸರು ನಾಡು ಕಟ್ಟುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ವರ್ಷಕ್ಕೊಮ್ಮೆ ನಡೆಯುವ ಪಚ್ಚೆಲಿಂಗ ದರ್ಶನ ಭಕ್ತರ ಇಷ್ಟಾರ್ಥ ನೆರವೇರಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. 2019ರಿಂದ ಶ್ರೀ ಮಠದಲ್ಲಿ ಪಚ್ಚೆಲಿಂಗ ದರ್ಶನ ಏರ್ಪಡಿಸುವ ಮೂಲಕ ಭಕ್ತರ ಸನ್ಮಂಗಲಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಧರ್ಮಪರವಾಗಿ ಇರುವವರ ಎಲ್ಲ ಕೆಲಸಗಳಲ್ಲೂ ಯಶಸ್ಸು ತಾನಾಗಿ ಕೂಡಿ ಬರುತ್ತದೆ ಎಂದು ಹೇಳಿದರು.
ಶಿರಕೊಳ ಮಠದ ಶ್ರೀ ಗುರುಸಿದ್ಧದೇವ ಶಿವಾಚಾರ್ಯ ಸ್ವಾಮೀಜಿ, ಬಳಸಗೋಡು ಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಸದಸ್ಯ ಟಿ.ಡಿ.ಮೇಘರಾಜ್, ಪ್ರಮುಖರಾದ ದಿನೇಶ್, ಎಂ.ಎಸ್.ಗೌಡರ್, ಜಗದೀಶ್ ಒಡೆಯರ್, ಬಿ.ಎ.ಇಂದೂಧರ ಬೇಸೂರು, ರಾಜೇಂದ್ರ ಆವಿನಹಳ್ಳಿ, ಅರುಣ್ ಪಾಟೀಲ್ ಇತರರಿದ್ದರು.