ಧರ್ಮಸ್ಥಳ ಯೋಜನೆಗಳಿಂದ ಗ್ರಾಮೀಣ ಜನರ ಬದುಕು ಹಸನು

01 RPT 1
ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿಯಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಭೆಯಲ್ಲಿ ಪ್ರದೀಪ್‌ಕುಮಾರ್ ಮಾತನಾಡಿದರು. ಮುರಳೀಧರ ಶೇಟ್, ಮೀನಾಕ್ಷಿ, ಎನ್.ಪಿ.ರಾಜು, ದೇವಾನಂದ ಇತರರಿದ್ದರು.
Published on

ರಿಪ್ಪನ್‌ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿ ಬದುಕು ಹಸನಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮುರಳೀಧರ ಶೇಟ್ ಹೇಳಿದರು.

ಸಮೀಪದ ಚಿಕ್ಕಜೇನಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸೋಮಾರಿತನ ಬಿಟ್ಟು ಕ್ರಿಯಾಶೀಲವಾಗಿ ಬದುಕುವ ರೀತಿಯನ್ನು ಯೋಜನೆ ಚಟುವಟಿಕೆಗಳು ಪರೋಕ್ಷವಾಗಿ ಕಲಿಸುತ್ತವೆ ಎಂದು ತಿಳಿಸಿದರು.

ಚಿಕ್ಕ ಹಿಡುವಳಿಯಲ್ಲಿ ಸಮೃದ್ಧ ಫಸಲು ತೆಗೆಯುವ, ಕಡಿಮೆ ಜಾಗದಲ್ಲಿ ಲಾಭದಾಯಕ ಉದ್ಯಮ ನಡೆಸುವ ಬಗ್ಗೆ ಯೋಜನೆ ತರಬೇತಿ ನೀಡುತ್ತದೆ. ಹೊಸನಗರ ತಾಲೂಕಿನ ಪ್ರತಿ ಗ್ರಾಮದಲ್ಲೂ ಯೋಜನೆಯ ಪರಿಣಾಮಕಾರಿ ಅನುಷ್ಠಾನ ನಡೆಯುತ್ತಿದೆ ಎಂದರು.

ಬದುಕಿನ ನೈಜತೆ ಅರಿತವರು ಸೋಲು ಅನುಭವಿಸುವುದಿಲ್ಲ. ಮುಖ್ಯ ಕೃಷಿ ಜತೆಗೆ ಪುಷ್ಪ ಕೃಷಿ, ಜೇನು ಸಾಕಣೆ, ಪಶುಪಾಲನೆ, ಗೊಬ್ಬರ ತಯಾರಿಕೆ ಇತ್ಯಾದಿಗಳ ಕುರಿತು ನಿರಂತರ ತರಬೇತಿ ಮತ್ತು ಅನುಷ್ಠಾನ ಮಾರ್ಗದರ್ಶನ ನೀಡಲಾಗುತ್ತಿದೆ. ಇದರಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ. ಪ್ರದೀಪ್‌ಕುಮಾರ್ ಹೊಸನಗರ ತಾಲೂಕು ಯೋಜನಾಧಿಕಾರಿ

ಚಿಕ್ಕಜೇನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಪ್ರಮಾಣ ವಚನ ಸ್ವೀಕರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ 800ಕ್ಕೂ ಅಧಿಕ ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ಎನ್.ಪಿ.ರಾಜು, ಜನಜಾಗೃತಿ ವೇದಿಕೆ ಸಂಚಾಲಕ ದೇವಾನಂದ, ಹೊಸನಗರ ತಾಲೂಕು ವರ್ತಕರ ಸಂಘದ ಅಧ್ಯಕ್ಷ ವಿಜಯೇಂದ್ರ ಶೇಟ್, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಉಮಾ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಕೋಡೂರು ವಲಯ ವ್ಯಾಪ್ತಿಯ ಎಲ್ಲ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net