

ಶಿರಾಳಕೊಪ್ಪ: ರಾಜ್ಯಾದ್ಯಂತ ಶಾಸಕರು ಅನುದಾನ ಇಲ್ಲದೆ ಕ್ಷೇತ್ರಗಳಿಗೆ ಕಾಲಿಡಲು ಕಷ್ಟವಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ತಂದಿರುವ ಅನುದಾನದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ವಿವೇಕ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಅನುಮೊದನೆ ದೊರೆತಿರುವ 3 ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶಾಸಕನಾಗಿ ಎರಡು ವರ್ಷ ಕಳೆದರೂ 5 ಕೋಟಿ ರೂ. ಅನುದಾನ ತರಲು ಸಾಧ್ಯವಾಗಿಲ್ಲ ಎಂದರು.
ರಾಜ್ಯದಲ್ಲಿ 275 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಶಿಕಾರಿಪುರಕ್ಕೆ ಎರಡು ಪಬ್ಲಿಕ್ ಶಾಲೆ ಮಂಜೂರಾಗಿವೆ. ತಾಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯಡಿಯೂರಪ್ಪ ಅವರು ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪಂಗಡಗಳ ಮುರಾರ್ಜಿ ಶಾಲೆಗಳು, ವಸತಿ ನಿಲಯಗಳನ್ನು ನಿರ್ಮಾಣ ಮಾಡಿದ್ದರು. ಬಿಎಸ್‌ವೈ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಎಲ್ಲರೂ ಭಾವೈಕ್ಯದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರು.
ಕಾಲೇಜು ವಿದ್ಯಾರ್ಥಿನಿಯರು ಶೌಚಗೃಹ ಕೊರತೆ ಇರುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಗಮೇಶ್, ಮಾಜಿ ಅಧ್ಯಕ್ಷೆ ನಿವೇದಿತಾ ರಾಜು, ಬಿಇಒ ಲೋಕೇಶ್, ಪ್ರಾಚಾರ್ಯ ಹಾಲಪ್ಪ, ಮುಖ್ಯಶಿಕ್ಷಕ ಶಿವು ನಾಯಕ್, ಟೌನ್ ಬಿಜೆಪಿ ಅಧ್ಯಕ್ಷ ಎ.ಸಿ.ಚನ್ನವೀರ ಶೆಟ್ರು, ಪೂಜಾ ಶ್ರೀಧರ್, ಹಾಲಪ್ಪ ಇತರರಿದ್ದರು.