ಪ್ರೀತಿ, ವಿಶ್ವಾಸ ಇದ್ದರೆ ಉತ್ತಮ ಆರೋಗ್ಯ

20sgr3
ಸಾಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ-ರೆಡ್‌ಕ್ರಾಸ್ ಸಂಸ್ಥೆಯಿಂದ ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಡಾ. ಎಚ್.ಎಂ.ಶಿವಕುಮಾರ್, ಡಾ. ನಿರಂಜನ, ಶಾಂತಕುಮಾರ್ ಇತರರಿದ್ದರು.
Published on

ಸಾಗರ: ಉತ್ತಮ ಆರೋಗ್ಯಕ್ಕೆ ಪ್ರೀತಿ, ವಿಶ್ವಾಸವೇ ಅಮೃತ. ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಬೇಕು. ಮನಸ್ಸಿನ ಆರೋಗ್ಯ ಸರಿಯಾಗಿದ್ದರೆ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಹೇಳಿದರು.

ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ರೋಟರಿ-ರೆಡ್‌ಕ್ರಾಸ್ ಸಂಸ್ಥೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋವಿಡ್ ನಂತರದ ದಿನಗಳಲ್ಲಿ ವೃದ್ಧಾಪ್ಯ, ಒಂಟಿತನ ಜಾಗತಿಕ ಸಮಸ್ಯೆಗಳಾಗಿವೆ. ಕುಟುಂಬದಲ್ಲಿ ಸಾಮಾಜಿಕವಾಗಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಮಾನಸಿಕ ಒತ್ತಡ, ಆಧುನಿಕ ಜೀವನಶೈಲಿ ಅಳವಡಿಕೆಯಿಂದ ದೈಹಿಕ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ ಎಂದು ತಿಳಿಸಿದರು.

ಬಹುತೇಕರು ಆರಂಭದಲ್ಲಿ ಅಂಕ ಗಳಿಕೆ ಹಿಂದೆ ಬೀಳುತ್ತಾರೆ. ನಂತರ ಹಣ ಗಳಿಕೆ ಹಿಂದೆ ಬೀಳುತ್ತಾರೆ. ಇದರಿಂದ ಕುಟುಂಬ ವ್ಯವಸ್ಥೆ ಛಿದ್ರವಾಗುತ್ತಿದೆ. ಗುಜರಾತ್ ರಾಜ್ಯದಲ್ಲಿ ಸಮೀಕ್ಷೆ ನಡೆಸಿದಾಗ ಶೇ.55ರಷ್ಟು ವೈದ್ಯರು ವಿವಿಧ ರೀತಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಬಹುಮುಖ್ಯವಾಗಿ ನಾವು ಸೇವಿಸುತ್ತಿರುವ ಆಹಾರ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮನೆಯಲ್ಲಿ ಸಿದ್ಧವಾಗುವ ಆಹಾರ ಸೇವನೆ ಮೂಲಕ ಕುಟುಂಬ ವ್ಯವಸ್ಥೆ ಗಟ್ಟಿಯಾಗಿಸಿಕೊಳ್ಳುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನಃಶಾಸ್ತ್ರ ಆಯ್ಕೆ ಮಾಡಲು ಸಲಹೆ: ಎಂಬಿಬಿಎಸ್ ಪದವಿ ನಂತರ ನಾನು ಮೆಡಿಸಿನ್ ವಿಭಾಗದಲ್ಲಿ ಎಂಡಿ ವ್ಯಾಸಂಗ ಮಾಡುವ ಉದ್ದೇಶ ಹೊಂದಿದ್ದೆ ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಹೇಳಿದರು. ಆಗ ನನಗೆ ಮಾರ್ಗದರ್ಶಕರು ಮೆಡಿಸಿನ್ ವಿಭಾಗ ಆಯ್ಕೆ ಮಾಡಿಕೊಳ್ಳುವ ಬದಲು ಮನಃಶಾಸ್ತ್ರ ವಿಭಾಗ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು. ಅಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಐವರು ಮನೋವೈದ್ಯರಿದ್ದರು. ಆದರೆ 52 ವರ್ಷಗಳಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಮನೋವೈದ್ಯರು ಇದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಮಟ್ಟದ ನಾಗರಿಕ ಸೇವಾ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳುವ ಕ್ರಮ ಬಂದಿದೆ. ರಾಜ್ಯ ಸರ್ಕಾರಗಳು ಸಹ ಕೇಂದ್ರ ಸರ್ಕಾರದ ಕ್ರಮ ಅನುಸರಿಸಬೇಕು. ಅನೇಕರು ಸದ್ದಿಲ್ಲದೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಂಥವರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿ ಮೌಲ್ಯ ಹೆಚ್ಚುತ್ತದೆ. ಪ್ರಶಸ್ತಿ, ಪುರಸ್ಕಾರಗಳು ನಾಗರಿಕ ಸಮಾಜದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ ಎಂದರು.

ರಕ್ತನಿಧಿ ಕೇಂದ್ರಕ್ಕೆ ಡಾ. ಸಿ.ಆರ್.ಚಂದ್ರಶೇಖರ್ ಆರ್ಥಿಕ ನೆರವು ನೀಡಿದರು. ರೋಟರಿ ರಕ್ತನಿಧಿ ಕೇಂದ್ರದ ಅಧ್ಯಕ್ಷ ಡಾ. ಎಚ್.ಎಂ.ಶಿವಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಡಾ. ನಿರಂಜನ ಹೊಸಬಾಳೆ, ಶಾಂತಕುಮಾರ್, ಡಾ. ಸಚಿನ್, ಹರೀಶ್, ವಿನಯ್, ವೈ.ಎ.ದಂತಿ, ಶಾಂತಾ ದಂತಿ, ಡಾ. ಜಗದೀಶ್ ಎಂ.ಭಂಡಾರಿ, ಕೆ.ಆರ್.ಬಿಂಬಾ, ಡಾ. ಪ್ರಭಾಕರ್, ಡಾ. ಟಿ.ಎಸ್.ರಾಘವೇಂದ್ರ, ಡಾ. ಬಿ.ಜಿ.ಸಂಗಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net