

ಶಿಕಾರಿಪುರ: ಶಿಕ್ಷಣದ ಮುಖೇನ ಮಾನವೀಯ ಮೌಲ್ಯಗಳು, ರಾಷ್ಟ್ರೀಯ ಚಿಂತನೆಗಳು ಮತ್ತು ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಅರಿವು ಮೂಡಿಸುವುದು ಮುಖ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಿದೆ. ಉತ್ತಮ ಸೌಲಭ್ಯ ನೀಡುವ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿರುವ ಸಂದರ್ಭ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.
ಶಿಕ್ಷಕರು ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಕಲಿಸುವ ಮೂಲಕ ಸದೃಢ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆ ಬೆಂಬಲಿಸಬೇಕು ಎಂದರು.
ಸಂಸ್ಥೆಯಲ್ಲಿ 15 ವರ್ಷಗಳಿಂದ ಕೆಲಸ ನಿರ್ವಹಿಸಿದವರಿಗೆ ಸೇವಾ ಸಿರಿ ಪ್ರಶಸ್ತಿ, ಸಂಶೋಧನಾ ಕ್ಷೇತ್ರದಲ್ಲಿ ಅಭ್ಯಾಸ ಮಾಡಿ ಪಿಎಚ್.ಡಿ ಪಡೆದವರಿಗೆ ಗೌರವ ಸನ್ಮಾನ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಾಗಿ ಶಿಕ್ಷಕ ವೃತ್ತಿಯಲ್ಲಿ ಸಾಧನೆ ಮಾಡಿ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು, ಅತಿಹೆಚ್ಚು ಅಂಕ ಗಳಿಸಿದವರು, ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ಪ್ರಾಚಾರ್ಯರಾದ ಡಾ. ಶಿವಕುಮಾರ್, ಡಾ. ವೀರೇಂದ್ರ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.