

ಸಾಗರ: ಸೇವಾ ಕಾರ್ಯಗಳು ಜನಮುಖಿಯಾಗಿದ್ದಾಗ ಮಾತ್ರ ಜನರು ಸಂಸ್ಥೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ ಹೇಳಿದರು.
ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಮಹಿಳಾ ಸಬಲೀಕರಣ, ಆಂತರಿಕ ಗುಣಮಟ್ಟ ಘಟಕದಿಂದ ಏರ್ಪಡಿಸಿದ್ದ ಕ್ಯಾನ್ಸರ್ ಮತ್ತು ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಸೇವೆಯ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಲಯನ್ಸ್ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, ಪ್ರತಿಯೊಬ್ಬರಿಗೂ ವೈದ್ಯರ ಸಲಹೆ ಅಗತ್ಯ. ವೈದ್ಯರ ಬಳಿ ಆರೋಗ್ಯ ಕುರಿತು ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬೇಕು. ವೈದ್ಯರನ್ನು ಗೌರವದಿಂದ ನೋಡುವುದು ಸಮಾಜದ ಕರ್ತವ್ಯ ಎಂದರು.
ವೈದ್ಯರ ದಿನಾಚರಣೆ ಅಂಗವಾಗಿ ಡಾ. ನಳಿನಿ ಭಾಗವತ್ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಸಣ್ಣಹನುಮಪ್ಪ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಕೆ.ಮಹಾಬಲೇಶ್, ವಲಯ ಅಧ್ಯಕ್ಷ ಎನ್.ಆರ್.ವಿನಯ್, ಈಳಿ ಶ್ರೀಧರ್, ಮೇಘಾ, ಮಮತಾ ಹೆಗಡೆ, ಚಿದಂಬರ ಇತರರಿದ್ದರು.