

ಶಿಕಾರಿಪುರ: ನಮ್ಮ ನಡೆ-ನುಡಿಗಳಲ್ಲಿ ಕನ್ನಡತನ ಕಾಣಬೇಕು. ನಾವು ಕನ್ನಡಿಗರು ಎಂಬ ಹಿರಿಮೆ ನಮಗಿರಲಿ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಜಕ್ಕಿನಕೊಪ್ಪದಲ್ಲಿ ಕನ್ನಡ ರಾಜ್ಯೋತ್ಸವ, ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಕನ್ನಡ ವಿಶ್ವದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಾವಿರುವ ಜಾಗದಲ್ಲಿ ಕನ್ನಡದ ಕಂಪು ಪಸರಿಸಬೇಕು. ಕನ್ನಡದ ಕಾರ್ಯ ಬಂದಾಗ ನಮ್ಮ ಹೆಜ್ಜೆಗಳು ಮುಂಚೂಣಿಯಲ್ಲಿರಬೇಕು. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ನಾವು ಸದಾ ಕಟಿಬದ್ಧರಾಗಿರಬೇಕು ಎಂದು ತಿಳಿಸಿದರು.
ಪ್ರತಿ ಮನೆಯೂ ಕನ್ನಡದ ಗುಡಿಯಾಗಬೇಕು. ಸಾಹಿತ್ಯ ಪ್ರಕಾಶಿಸುತ್ತಿರಬೇಕು. ಸಾಹಿತ್ಯ ಪುಸ್ತಕಗಳ ಅಧ್ಯಯನ ಮಾಡುವುದನ್ನು ಮಕ್ಕಳಿಗೆ ಕಲಿಸಬೇಕು. ಕರ್ನಾಟಕಕ್ಕೆ ವಿಶ್ವದಲ್ಲಿ ವಿಶೇಷ ಸ್ಥಾನಮಾನವಿದೆ. ಕನ್ನಡ ಸಾಹಿತ್ಯ, ಭಾಷೆಯ ಸಾಂಸ್ಕೃತಿಕ ಸಂಪತ್ತನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ನಾವು ಸಾಗಬೇಕು ಎಂದರು.
ಬದುಕಿನಲ್ಲಿ ದೇವರು, ದೇವಸ್ಥಾನ, ಗುರುಗಳು ಮತ್ತು ಮಠ ಮಂದಿರಗಳ ಪಾತ್ರ ಹಿರಿದು. ಬದುಕಿನ ಅಡಿಪಾಯವೇ ಅಧ್ಯಾತ್ಮ. ಹಿರಿಯರು ನಮಗೆ ಬಳುವಳಿಯಾಗಿ ನೀಡಿದಂತಹ ಆಚಾರ, ವಿಚಾರ, ಸಂಪ್ರದಾಯ ಪರಂಪರೆಗಳನ್ನು ಮುಂದುವರಿಸಬೇಕು. ದೀಪ ಹಚ್ಚುವುದು ನಮ್ಮ ಸಂಸ್ಕೃತಿ. ಭಗವಂತನಿಗೆ ದೀಪಾರಾಧನೆ ಮಾಡಿದರೆ ಅವನು ನಮ್ಮ ಬದುಕನ್ನು ಬೆಳಗುತ್ತಾನೆ ಎಂದು ತಿಳಿಸಿದರು.
ಕನ್ನಡ ಸಂಘದ ಅಧ್ಯಕ್ಷ ಪ್ರಹ್ಲಾದ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಕೆ.ಗುರುರಾಜ್, ಶಿಕ್ಷಕ ಸುರೇಶ್, ಗ್ರಾಪಂ ಅಧ್ಯಕ್ಷ ರುದ್ರೇಶ್, ರೇವಣಪ್ಪ, ನಾಗರಾಜ, ಸಿದ್ದಯ್ಯ, ರಮೇಶ್ ಪೂಜಾರಿ, ಬಸವರಾಜ್, ಶಿವರಾಜ್ ಇತರರಿದ್ದರು.