

ತೀರ್ಥಹಳ್ಳಿ: ಜೆಸಿ ಆಸ್ಪತ್ರೆ ವೈದ್ಯರ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ನಾಗರಿಕ ವೇದಿಕೆ ಪದಾಧಿಕಾರಿಗಳು ಪಟ್ಟಣದ ಜೆಸಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಆಸ್ಪತ್ರೆಯಿಂದ ವರ್ಗಾವಣೆ ಮಾಡಿರುವ ಎಲ್ಲ ತಜ್ಞ ವೈದ್ಯರ ಸ್ಥಾನಕ್ಕೆ ಪರ್ಯಾಯವಾಗಿ ವೈದ್ಯರ ನೇಮಕ ಮಾಡದೆ ಈಗಿರುವ ವೈದ್ಯರನ್ನು ರಿಲೀವ್ ಮಾಡಬಾರದು. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಈಗಿರುವ ಸಿಬ್ಬಂದಿ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಆರೋಗ್ಯ ಇಲಾಖೆ ಮೇಲಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಆರೋಗ್ಯ, ಶಿಕ್ಷಣ ಸಮಸ್ಯೆಗಳ ಬಗ್ಗೆ ಜನರು ಪ್ರತಿಭಟನೆ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕಿರುವುದು ವಿಪರ್ಯಾಸ. ಸರ್ಕಾರ ಜನರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಉದಾಸೀನ ಮಾಡಬಾರದು. ಹೊಸದಾಗಿ ವೈದ್ಯರನ್ನು ನೇಮಕ ಮಾಡದ ಸರ್ಕಾರ ಉತ್ತಮ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗಾವಣೆ ಮಾಡಿ ಆಸ್ಪತ್ರೆಗಳಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ, ನಿಯಮದಂತೆ ರಾಜ್ಯಮಟ್ಟದಲ್ಲಿ ವರ್ಗಾವಣೆ ನಡೆದಿದೆ. ಯಾವುದೇ ರೀತಿ ಬದಲಾವಣೆ ಅಸಾಧ್ಯ. ಜೆಸಿ ಆಸ್ಪತ್ರೆಯಿಂದ ವರ್ಗವಾಗಿರುವ ಆರು ವೈದ್ಯರಲ್ಲಿ ನಾಲ್ಕು ಮಂದಿ ವೈದ್ಯರ ನೇಮಕವಾಗಿದೆ. ಉಳಿದ ಎರಡು ಹುದ್ದೆಗಳಿಗೂ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಭರವಸೆ ನೀಡಿದರು.
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸುಶೀಲಾ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ಪತ್ರಕರ್ತ ಡಾನ್ ರಾಮಣ್ಣ, ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ನಾಗರಾಜ್, ನಾರಾಯಣಗುರು ವಿಚಾರ ವೇದಿಕೆ ಸಮಿತಿಯ ವಿಶಾಲ್‌ಕುಮಾರ್ ಇತರರಿದ್ದರು.