ಆರು ದಶಕಗಳ ಕನಸು ನನಸು

10sgr2
ಸಾಗರದ ನೆಹರು ಮೈದಾನದಲ್ಲಿ ಜು.14ರಂದು ನಡೆಯುವ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಡಾ. ರಾಜನಂದಿನಿ ಕಾಗೋಡು, ಟಿ.ಡಿ.ಮೇಘರಾಜ್ ಮತ್ತಿತರರು ಇದ್ದರು.
Published on

ಸಾಗರ: ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜು.14ರಂದು ನಡೆಯುವ ಕಾರ್ಯಕ್ರಮ ಐತಿಹಾಸಿಕವಾಗಲಿದೆ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ತರ ಆರು ದಶಕದ ಕನಸು ನನಸಾಗುವ ಸಂದರ್ಭ ಇದಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ನಗರದ ನೆಹರು ಮೈದಾನದಲ್ಲಿ ಜು.14ರಂದು ನಡೆಯುವ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿ, ಬೆಳಗ್ಗೆ 10.30ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಳೆಬಾಗಿಲು ಸಿಗಂದೂರು ಸೇತುವೆ ಲೋಕಾರ್ಪಣೆ ಮಾಡಲಿದ್ದು, ನಂತರ ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸುವರು ಎಂದು ತಿಳಿಸಿದರು.

ಮಧ್ಯಾಹ್ನ 12ಕ್ಕೆ ನೆಹರು ಮೈದಾನದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ, ಪ್ರಲ್ದಾದ ಜೋಷಿ ಸೇರಿ ರಾಜ್ಯ ಸರ್ಕಾರದ ಸಚಿವರು, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಸ್ಥಳೀಯ ಶಾಸಕರು ಸೇರಿ ಪ್ರಮುಖರು ಪಾಲ್ಗೊಳ್ಳುವರು. ಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅವರು ಸಂಸದರಾಗಿದ್ದಾಗ ಮನಸ್ಸು ಮಾಡದೆ ಹೋಗಿದ್ದರೆ ಸೇತುವೆ ಈ ಪೀಳಿಗೆಗೆ ಮರೀಚಿಕೆಯಾಗುತ್ತಿತ್ತು ಎಂದರು.

ಇದು ಯಾವುದೇ ಪಕ್ಷ, ಜಾತಿ ಕಾರ್ಯಕ್ರಮವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿರುವ ಕಾರ್ಯಕ್ರಮ. ಕೇಂದ್ರ ಸಚಿವರು 10 ಸಾವಿರ ಕೋಟಿ ರೂ. ವೆಚ್ಚದ ಮೂರು ಜಿಲ್ಲೆಗಳ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ತೀರ್ಮಾನ: ಸೇತುವೆಗೆ ಏನು ಹೆಸರು ಇಡಬೇಕು ಎನ್ನುವ ತೀರ್ಮಾನ ರಾಜ್ಯ ಸರ್ಕಾರ ಮಾಡುತ್ತದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಕೇಂದ್ರ ಘೋಷಿಸುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು. ಈಗಾಗಲೇ ಸೇತುವೆಯನ್ನು ಶರಾವತಿ ಸೇತುವೆ, ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ, ತುಮರಿ ಸೇತುವೆ, ಹೊಳೆಬಾಗಿಲು ಸೇತುವೆ, ಸಿಗಂದೂರು ಸೇತುವೆ ಸೇರಿ ಹಲವು ಹೆಸರುಗಳಲ್ಲಿ ಕರೆಯಲಾಗುತ್ತಿದೆ. ಯಡಿಯೂರಪ್ಪ ಹೆಸರು ಇಡಬೇಕು ಎಂದು ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸಿಗಂದೂರು ಚೌಡೇಶ್ವರಿ ಸೇತುವೆ ಎಂಬ ನಾಮಕರಣದ ಪ್ರಸ್ತಾಪ ಮಾಡಿದ್ದಾರೆ. ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹಿನ್ನೀರಿನ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದ್ದನ್ನು, ಕೇಂದ್ರ ಸರ್ಕಾರ, ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಅಸಾಧ್ಯ ಆಗಿದ್ದನ್ನು ಸಾಧ್ಯವಾಗಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಮೈತ್ರಿ ಪಾಟೀಲ್, ಸವಿತಾ ವಾಸು, ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ವಿ.ಮಹೇಶ್, ಅಶೋಕ್, ಅರುಣ ಕುಗ್ವೆ, ಪರಶುರಾಮ್, ಶ್ರೀರಾಮ್, ಮಂಜಯ್ಯ ಜೈನ್, ಭೈರಪ್ಪ, ಸಂತೋಷ್, ಕೆ.ಸತೀಶ್, ವೀರರಾಜ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net