ದೊಡ್ಡ ಕಟ್ಟಡ, ಆಕರ್ಷಣೆಯಿಂದ ಶಿಕ್ಷಣ ದುಬಾರಿ

5 RPT 1
ರಿಪ್ಪನ್‌ಪೇಟೆ ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಉದ್ಘಾಟಿಸಿದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಡಾ. ಧನಂಜಯ ಸರ್ಜಿ, ಸುಧೀಂದ್ರ ಪೂಜಾರಿ ಇತರರಿದ್ದರು.
Published on

ರಿಪ್ಪನ್‌ಪೇಟೆ: ದೊಡ್ಡ ದೊಡ್ಡ ಕಟ್ಟಡ, ವಿವಿಧ ಆಕರ್ಷಣೀಯ ಸಂಗತಿಗಳ ಬಗ್ಗೆ ಜನರ ತಲೆಯಲ್ಲಿ ವಿಚಾರಗಳನ್ನು ತುಂಬಿದ ಬಂಡವಾಳಶಾಹಿಗಳು ಶಿಕ್ಷಣವನ್ನು ದುಬಾರಿಯಾಗಿಸಿದ್ದಾರೆ ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಕೊಠಡಿ, ಗ್ರಂಥಾಲಯ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ, ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಕೆಯೇ ಶ್ರೇಷ್ಠ ಎನ್ನುವುದು ಸರಿಯಲ್ಲ. ಮಕ್ಕಳಿಗೆ ಮೌಲ್ಯಯುತ, ನೈತಿಕ ಶಿಕ್ಷಣದ ಅಗತ್ಯವಿದೆ. ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಿದಾಗ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ. ಸುಸಂಸ್ಕೃತ ಜೀವನ ನಿರ್ವಹಣೆಗೆ ಸಂಸ್ಕಾರಯುತ ಶಿಕ್ಷಣ ಬುನಾದಿ. ಪಾಲಕರು ಮಕ್ಕಳನ್ನು ಸಮಾಜದ ಸಂಪನ್ಮೂಲಗಳೆಂದು ಪರಿಭಾವಿಸಿ ಬೆಳೆಸಬೇಕು ಎಂದು ತಿಳಿಸಿದರು.

ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಪ್ರತಿ ಮಕ್ಕಳಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಪೌಷ್ಟಿಕ ಆಹಾರ ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಹೆಚ್ಚು ಆಸಕ್ತಿ ವಹಿಸಿ ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ನೂತನ ಕೊಠಡಿ ದಾನಿಗಳಾದ ಕರೆಕಟ್ಟೆ ಮಂಗಳಮ್ಮ, ನೀಲಕಂಠಪ್ಪ ಮತ್ತು ಗದಗ ಬೆಟಗೇರಿಯ ಪರಪ್ಪ ಬಿ. ಬೇವಿನಮರದ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಬಿಇಒ ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಕಾಂಬ್ಳೆ, ಪೋಷಕ ಸಮಿತಿ ಅಧ್ಯಕ್ಷ ಈಶ್ವರ ಮಳಕೊಪ್ಪ, ಗ್ರಾಪಂ ಸದಸ್ಯರಾದ ಎನ್.ಚಂದ್ರೇಶ, ಅಶ್ವಿನಿ, ಸುಂದರೇಶ, ಮುಖಂಡರಾದ ಎಲ್.ವೈ.ದಾನೇಶಪ್ಪ, ಎಚ್.ಎಂ.ವರ್ತೇಶ್, ಮುಖ್ಯಶಿಕ್ಷಕ ಚಂದ್ರಪ್ಪ, ಗುರುಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net