

ಭದ್ರಾವತಿ: ಕುವೆಂಪು ಅವರ ಆಶಯಗಳು ಇಂದಿಗೂ ಪ್ರಸ್ತುತ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕೆ.ಬಿ.ತಮ್ಮಯ್ಯ ಗೌಡ, ಅಕ್ಕಾಣಿಯಮ್ಮ ದತ್ತಿ ಕಾರ್ಯಕ್ರಮ, ಸತ್ಯಕ್ಕೆ ಸಾವಿಲ್ಲ ಕಥಾ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಲವಾರು ಭಾಷೆ, ಜಾತಿಗಳಿರುವ ಆಧುನಿಕ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಕೆಲಸ ನಾವೆಲ್ಲರೂ ಕೂಡಿ ಮಾಡಬೇಕಿದೆ. ದಾರ್ಶನಿಕರ ಮಾತುಗಳು ಬದ್ಧತೆಯಿಂದ ಕೂಡಿರುತ್ತಿತ್ತು. ಅವರ ಬದ್ಧತೆಯ ಮಾತುಗಳನ್ನು ನಾವೆಲ್ಲರೂ ಅನುಸರಿಸಬೇಕಿದೆ ಎಂದು ತಿಳಿಸಿದರು.
ಮಲೆನಾಡಿನ ಸಂಸ್ಕೃತಿ ದಾಖಲು: ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಎಸ್ಎವಿ ಕಾಲೇಜು ಪ್ರಾಚಾರ್ಯೆ ಡಾ. ಹರಿಣಾಕ್ಷಿ ಹೇಳಿದರು. ಸತ್ಯಕ್ಕೆ ಸಾವಿಲ್ಲ ಕಥಾ ಸಂಕಲನ ಕುರಿತು ಮಾತನಾಡಿ, ಕೋಡ್ಲು ಯಜ್ಞಯ್ಯ ಅವರು ಅನುಭವವನ್ನು ಕಥೆಗಳ ರೂಪದಲ್ಲಿ ಬಿಚ್ಚಿಟ್ಟು, ಮಲೆನಾಡು ಭಾಗದ ಅಂದಿನ ಸಂಸ್ಕೃತಿಯನ್ನು ದಾಖಲಿಸಿದ್ದಾರೆ. ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ದತ್ತಿ ಕಾರ್ಯಕ್ರಮ ಒಳ್ಳೆಯ ಕೆಲಸ ಮಾಡಿದವರ ಹಾಗೂ ಪಾಲಕರ ನೆನಪುಗಳನ್ನು ಜೀವಂತವಾಗಿಸುವ ಕೆಲಸ ಮಾಡುತ್ತಿದೆ. ಸಮಕಾಲೀನ ಸಮಾಜಕ್ಕೆ ಒಳ್ಳೆಯ ವಿಚಾರಗಳನ್ನು ಕೊಡುವುದು ದತ್ತಿ ಕಾರ್ಯಕ್ರಮದ ಆಶಯ. ಮಕ್ಕಳಿಗೆ ಸಾಹಿತ್ಯದ ರುಚಿ ಉಣಬಡಿಸಬೇಕಿದೆ. ಓದುವ ಸಂಸ್ಕೃತಿ ಬೆಳೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಡಾ. ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಕುವೆಂಪು ಅವರು 60 ವರ್ಷ ಸಾಹಿತ್ಯ ಕೃಷಿ ನಡೆಸಿದ್ದಾರೆ. ಅವರ ಸಾಹಿತ್ಯದಲ್ಲಿ ವೈಚಾರಿಕತೆ ಅಡಗಿತ್ತು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಪತ್ರ ಸಂಸ್ಕೃತಿ ಸಂಸ್ಥಾಪಕ ಹೊಸಳ್ಳಿ ದಾಳೇಗೌಡ, ರೋಟರಿ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಎಂ.ಎಸ್.ಸುಧಾಮಣಿ, ಎಂ.ಆರ್.ರೇವಣಪ್ಪ, ನಾಗೋಜಿ ರಾವ್, ಎಚ್.ತಿಮ್ಮಪ್ಪ, ಮೋಹನ್ಕುಮಾರ್ ಇತರರಿದ್ದರು.