ಸದಾಶಿವ ಆಯೋಗದ ವರದಿ ಮರಣ ಶಾಸನ: ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಆತಂಕ

bhovi
Published on

ಶಿವಮೊಗ್ಗ: ಪರಿಶಿಷ್ಟ ಜಾತಿಗೆ ಸೇರಿದ 101 ಸಮುದಾಯಗಳ ಪೈಕಿ ಬೆರಳೆಣಿಕೆಯಷ್ಟು ಸಮುದಾಯಗಳು ಮಾತ್ರ ಸಂಟನಾತ್ಮಕವಾಗಿವೆ. ಶಿಕ್ಷಣದಲ್ಲಿ ಮುಂದುವರಿದಿವೆ. ಇಂದಿಗೂ ಹಿಂದುಳಿದಿರುವ ಸಮುದಾಯಗಳ ಪಾಲಿಗೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮರಣ ಶಾಸನವಾಗಲಿದೆ ಎಂದು ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ವರದಿಯ ಕೆಲವು ಅಂಶಗಳು ಸೋರಿಕೆಯಾಗಿವೆ. ಇವುಗಳನ್ನು ಅಧ್ಯಯನ ನಡೆಸಿದಾಗ ಪರಿಶಿಷ್ಟ ಜಾತಿಗೆ ಸೇರಿದ ಬಹುತೇಕ ಸಮುದಾಯಗಳು ಮೀಸಲಾತಿಯ ಪ್ರಯೋಜನದಿಂದ ವಂಚಿತವಾಗುವ ಅಪಾಯವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅನಕ್ಷರಸ್ಥ ಸಮುದಾಯಗಳು ಆಯೋಗದ ಎದುರು ತಮ್ಮ ಹಕ್ಕನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಈಗ ವರದಿಯಲ್ಲಿ ಅನೇಕ ಅಂಶಗಳು ಮೀಸಲಾತಿಯ ಮೂಲ ಆಶಯಕ್ಕೆ ವಿರುದ್ಧವಾಗಿವೆ. ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೆಲ ಸಮುದಾಯಗಳನ್ನು ಕೈ ಬಿಟ್ಟರೂ ಆಶ್ಚರ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಸ್ವೀಕರಿಸಿರುವ ಆಯೋಗದ ವರದಿಯ ಪ್ರತಿಯನ್ನು ಮೊದಲು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವರದಲ್ಲಿರುವ ಅಂಶಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯಬೇಕು. ಬಳಿಕ ಸರ್ಕಾರ ಜನರ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ವರದಿಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿಯಬೇಕೆಂದು ಒತ್ತಾಯಿಸಿದರು.

ರಾಜ್ಯವ್ಯಾಪಿ ಪ್ರವಾಸ ಮಾಡಿ ಸದಾಶಿವ ಆಯೋಗದ ವರದಿಯಲ್ಲಿನ ಪ್ರತಿಕೂಲ ಅಂಶಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದೇವೆ. ಇದರ ಪ್ರತಿಫಲವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟವು ಸಂಘಟಿತವಾಗಿ ಹೋರಾಟ ನಡೆಸುತ್ತಿದೆ. ಸರ್ಕಾರ ನಮ್ಮೆಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂದು ಶ್ರೀಗಳು ಆಗ್ರಹಿಸಿದರು.

ಕರ್ನಾಟಕ ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ.ನಾನ್ಯನಾಯ್ಕ, ಕಾರ್ಯಾಧ್ಯಕ್ಷ ಎಸ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಜಗದೀಶ್, ಸಂಚಾಲಕ ಧೀರರಾಜ ಹೊನ್ನವಿಲೆ, ಕೊರಚ ಸಮಾಜದ ಮುಖಂಡ ಪ್ರಕಾಶ್ ಲಿಗಾಡಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಬೆಂಗಳೂರು ಚಲೋ ಜ.10ಕ್ಕೆ

ಸದಾಶಿವ ಅಯೋಗದ ವರದಿಯ ಅಂಗೀಕಾರದ ಬಗ್ಗೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಂದಲೂ ಆಕ್ಷೇಪಣೆ, ಸಲಹೆಗಳನ್ನು ಸ್ವೀಕರಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ಜ.5ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಸುಮಾರು 10 ಸಾವಿರ ಮಂದಿ ಬೆಂಗಳೂರು ಚಲೋದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಂ.ವೈ.ನಾನ್ಯನಾಯ್ಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net