

ಸೊರಬ: ಜಗತ್ತಿಗೆ ಮಾನವೀಯ ಮೌಲ್ಯ ಹಾಗೂ ಸಮಾನತೆ ಸಂದೇಶ ಸಾರಿದ ವಚನಕಾರ ಬಸವಣ್ಣ ಅವರ ತತ್ವಾದರ್ಶಗಳು ಮನುಕುಲಕ್ಕೆ ದಾರಿದೀಪ ಎಂದು ಜಡೆ ಸಂಸ್ಥಾನದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಬಸವ ಸಮಿತಿ, ಜಡೆ ಸಂಸ್ಥಾನ ಮಠ ಹಾಗೂ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ವಿಶ್ವಗುರು ಬಸವಣ್ಣ ಅವರು ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿ, ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ. 12ನೇ ಶತಮಾನ ಎಂಬುದು ಬಹಳ ಮಹತ್ವದ್ದಾಗಿದೆ. ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ಸಮುದಾಯದವರಿಗೆ ಸಮಾನತೆ ನೀಡಿದರು. ನುಡಿದಂತೆ ನಡೆದು ವಚನಗಳ ಮೂಲಕ ಅಂದಿನ ಕಾಲಘಟ್ಟದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆ ವಿರುದ್ಧ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ ಎಂದು ತಿಳಿಸಿದರು.
ಕಿರಿಯ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಅಬಲೂರಿನ ಶ್ರೀ ಗಂಗಾಧರ ದೇವರು, ಜಡೆ ಗ್ರಾಮಸ್ಥರು ಪಾಲ್ಗೊಂಡಿದ್ದರು.