

ಶಿವಮೊಗ್ಗ: ಬೆಂಗಳೂರಿನಲ್ಲಿ ಡಿ.13ರಿಂದ ಆರಂಭವಾಗಲಿರುವ ಜಿ20- ಶೃಂಗಸಭೆಗೆಂದು ಸಕ್ರೆಬೈಲು ಆನೆ ಬಿಡಾರದಿಂದ ಎರಡು ಆನೆಗಳು ಈಗಾಗಲೇ ದೇವನಹಳ್ಳಿ ತಲುಪಿವೆ. ಇದೇನು? ವಿಶ್ವದ ಹಲವು ರಾಷ್ಟ್ರಗಳ ಪ್ರಮುಖರು ಭಾಗವಹಿಸಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಈ ಆನೆಗಳಿಗೇನು ಕೆಲಸ? ಎಂಬ ಪ್ರಶ್ನೆ ಮೂಡದೇ ಇರದು.
ಇಷ್ಟು ದಿನ ದಸರಾ, ಕಾಡಾನೆ, ಚಿರತೆ, ಹುಲಿ ಸೆರೆಯ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಕ್ರೆಬೈಲು ಆನೆಗಳಿಗೆ ಈಗ ವಿನೂತನ ಜವಾಬ್ದಾರಿ ಹೆಗಲೇರಿದೆ. ದೇಶ, ವಿದೇಶಗಳಿಂದ ಆಗಮಿಸುವ ಗಣ್ಯರಿಗೆ ಮಾಲಾರ್ಪಣೆ ಮಾಡಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವ ಹೊಣೆಗಾರಿಕೆ ಈಗ ಬಿಡಾರದ ಆನೆಗಳಾದ ಸಾಗರ ಹಾಗೂ ಭಾನುಮತಿ ಮೇಲಿದೆ.
ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್ ಮುಂದಾಳತ್ವದಲ್ಲಿ ಬೆಂಗಳೂರು ದೇವನಹಳ್ಳಿ ಸಮೀಪದ ಅರಣ್ಯ ಇಲಾಖೆ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿರುವ ಎರಡು ಆನೆಗಳು 13ರ ಬೆಳಗ್ಗೆ ಶಂಗ ಸಭೆ ಆರಂಭವಾಗಲಿರುವ ರೆಸಾರ್ಟ್‌ಗೆ ತೆರಳಲಿವೆ. ಬೆಳಗ್ಗೆ 7.30 ರಿಂದ 9.30ರವರೆಗೆ ರೆಸಾರ್ಟ್ ಮುಖ್ಯ ದ್ವಾರದಲ್ಲಿ ನಿಂತು ಅತಿಥಿಗಳಿಗೆ ಮಾಲರ್ಪಣೆ ಮಾಡಿ ಸ್ವಾಗತ ಕೋರಲಿವೆ. ಡಿ.14ರಂದು ದೇವನಹಳ್ಳಿಯಿಂದ ಸಕ್ರೆಬೈಲು ಕಡೆಗೆ ಪ್ರಯಾಣ ಬೆಳೆಸಲಿವೆ.