

ರಿಪ್ಪನ್‌ಪೇಟೆ: ಮಲೆನಾಡು ಭಾಗದಲ್ಲಿ ಮಳೆಹಾನಿ, ಮುಳುಗಡೆ ಸಂತ್ರಸ್ತರ ಬವಣೆ, ಅರಣ್ಯ ಕಾನೂನಿಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬೆಳ್ಳೂರು ಗ್ರಾಮದ ಸರ್ವೇ ನಂ. 13, 42, ದೊಬೈಲು ಗ್ರಾಮದ ಸ.ನಂ. 42ರ ಹತ್ತಿರ ಪಿಕ್‌ಅಪ್ ಡ್ಯಾಂ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿ, ಗುಳಗುಳಿಶಂಕರ, ಬೆಳ್ಳೂರು ಕ್ಯಾಂಪ್ ರಸ್ತೆ ನಿರ್ಮಾಣ ಸೇರಿ ಒಟ್ಟು 1.55 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಪರ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಅವರು ಭಾಷಣ ಮಾಡಿದ್ದು ಬಿಟ್ಟರೆ ಕೆಲಸವನ್ನೇನೂ ಮಾಡಿಲ್ಲ. ಕೇವಲ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸಿರುವ ಫಲವಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇಗೆ ಮುಂದಾಗಿವೆ ಎಂದರು.
ಮುಳುಗಡೆ ಸಂತ್ರಸ್ತರ ನೆರವಿಗಾಗಿ ಜಂಟಿ ಸರ್ವೇ ಕೈಗೊಳ್ಳಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ರೈತರಿಗೆ ಜಮೀನಿನ ಪಟ್ಟ ಕೊಡಿಸಲು ಸತತ ಪ್ರಯತ್ನಿಸಲಾಗುತ್ತದೆ. ರೈತರ ಸಾಗುವಳಿ ಜಮೀನನ್ನು ತೆರವುಗೊಳಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಜನರ ಬದುಕು ಹಸನಾಗಿಸುವುದು ರಾಜ್ಯ ಸರ್ಕಾರದ ಉದ್ದೇಶ. ಗೋಪಾಲಕೃಷ್ಣ ಬೇಳೂರು ಸಾಗರ ಶಾಸಕ
ನೆವಟೂರಿನ ಆನೆಕೆರೆಗೆ, ಕೆಂಚನಾಲದ ವೀರಣ್ಣನಕೆರೆ, ಹಾರೋಹಿತ್ತಲುಕೆರೆ, ಗವಟೂರು ಕೆರೆ, ಅರಸಾಳು ಹತ್ತಿರ ಕುಮದ್ವತಿ ನದಿಗೆ ಬ್ಯಾರೇಜ್ ನಿರ್ಮಾಣ ಅಭಿವೃದ್ಧಿಗೆ 3.80 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿವೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಅರುಣ, ಮುಖಂಡರಾದ ಚಂದ್ರಮೌಳಿ, ಈಶ್ವರಪ್ಪ ಗೌಡ, ಬೆಳ್ಳೂರು ಯೋಗೀಶ, ರಾಮಣ್ಣ, ಮಂಜಪ್ಪ, ಸತೀಶ, ವೆಂಕಟೇಶ, ತಾಪಂ ಇಒ ನರೇಂದ್ರಕುಮಾರ್, ಆರ್‌ಎಫ್‌ಒ ಪವನ್ ಕುಮಾರ್, ಮೆಸ್ಕಾಂ ಅಧಿಕಾರಿ ಅಶ್ವಲ್ ಇತರರಿದ್ದರು.