

ಸೊರಬ: ಆಧುನಿಕ ಮಾಧ್ಯಮಗಳ ಪ್ರಭಾವದ ನಡುವೆ ನಾಟಕ, ಯಕ್ಷಗಾನ, ಬಯಲಾಟದಂತ ಗ್ರಾಮೀಣ ಕಲೆಗಳು ನಶಿಸದಂತೆ ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗುತ್ತಿರುವುದು ಶ್ಲಾಘನೀಯ ಎಂದು ದಂತ ವೈದ್ಯ ಜ್ಞಾನೇಶ್ ಹೇಳಿದರು.
ತಾಲೂಕಿನ ಕಡೇ ಜೋಳದಗುಡ್ಡೆ ಗ್ರಾಮದಲ್ಲಿ 7ನೇ ವರ್ಷದ ಶ್ರೀ ನಾಗಚೌಡೇಶ್ವರಿ ದೇವಿ ಸಮಾರಾಧನೆ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಪರಿಕರಗಳನ್ನು ಬಳಸದೆ ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ನಾಟಕ ಪ್ರದರ್ಶನ ಮಾಡುತ್ತಿರುವುದರಿಂದ ಗ್ರಾಮೀಣ ಸಂಸ್ಕೃತಿ ಉಳಿಸಿದಂತಾಗುತ್ತದೆ. ನಾಟಕಗಳಲ್ಲಿ ನ್ಯಾಯ, ಅನ್ಯಾಯಗಳ ಪರಾಮರ್ಶೆ ನಡೆಯುತ್ತದೆ. ನಾಟಕವನ್ನು ಗ್ರಾಮಗಳಲ್ಲಿ ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಯುವಕರು ಭಾಗವಹಿಸಿ ಪ್ರತಿಭೆ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದರು.
ಚಂದ್ರಗುತ್ತಿ ಗ್ರಾಪಂ ಉಪಾಧ್ಯಕ್ಷ ರೇಣುಕಪ್ರಸಾದ್ ಮಾತನಾಡಿ, ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಪರಶುರಾಮ್, ಗ್ರಾಪಂ ಸದಸ್ಯ ಎಂ.ಪಿ.ರತ್ನಾಕರ, ಮಾಜಿ ಸದಸ್ಯ ನಾರಾಯಣಪ್ಪ, ಸಂತೋಷ್, ಚಂದ್ರಪ್ಪ, ಮಂಜಪ್ಪ, ರಾಮಚಂದ್ರಪ್ಪ, ಹುಲಿಯಣ್ಣ, ತಿಮ್ಮಪ್ಪ, ಕಲ್ಲಪ್ಪ, ಪುಟ್ಟಪ್ಪ, ಲೋಕೇಶ್, ಈಶ್ವರ್, ದಬ್ಬಣ್ಣ, ನಂದಪ್ಪ, ಲಕ್ಷ್ಮಣ, ಪ್ರಶಾಂತ್, ಗಣೇಶ್ ಇತರರಿದ್ದರು.