ಮಾವುಕಲ್ಲೇಶ್ವರಬೆಟ್ಟದ ಶಿವಲಿಂಗ ಭಗ್ನ

IMG-20200219-WA0060
Published on

ಪಿರಿಯಾಪಟ್ಟಣ: ತಾಲೂಕಿನ ಕೋಗಿಲವಾಡಿ ಬಳಿ ಇರುವ ಮಾವುಕಲ್ಲೇಶ್ವರಬೆಟ್ಟದ ಮೇಲಿನ ಶಿವನ ಭಗ್ನಗೊಳಿಸಿರುವುದು ಬುಧವಾರ ಪತ್ತೆಯಾಗಿದೆ.

ಪ್ರತಿವರ್ಷ ಮುಂಗಾರಿನ ಆರಂಭದಲ್ಲಿ ಗ್ರಾಮೀಣ ಜನರು ಐತಿಹಾಸಿಕ ಮಾವುಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಮಳೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದೇವಾಲಯದಲ್ಲಿ ನಿಧಿ ಇದೆ ಎಂದು ಭಾವಿಸಿ ಕಳ್ಳರು ಈ ದೇವಾಲಯಕ್ಕೆ ನುಗ್ಗಿ ಶಿವಲಿಂಗವನ್ನು ಧ್ವಂಸ ಮಾಡಿದ್ದಾರೆ.

ಶಿವರಾತ್ರಿಯ ಮುನ್ನ ಈ ದೇವಾಲಯಕ್ಕೆ ಸುಣ್ಣಬಣ್ಣ ಬಳಿಯುವುದು ಇಲ್ಲಿನ ಜನರ ಸಂಪ್ರದಾಯ. ಬುಧವಾರ ಬೆಳಗ್ಗೆ ಪಿರಿಯಾಪಟ್ಟಣದ ಬೇಗೂರು ಗ್ರಾಮದ ವಿಜಯ್ ಎಂಬುವರು ದೇವಾಲಯಕ್ಕೆ ಭೇಟಿ ನೀಡಿದಾಗ ಶಿವಲಿಂಗ ಭಗ್ನಗೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ವಿಷಯವನ್ನು ಕೋಗಿಲವಾಡಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಿಗೆ ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಕೃತ್ಯದ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪಿಎಸ್‌ಐ ಗಣೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net