

ಶಿವಮೊಗ್ಗ: ವೀರಶೈವ- ಲಿಂಗಾಯತ ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯ ಮೂಡುತ್ತಿರುವುದರಿಂದ ಜಿಲ್ಲೆಯ ಎಲ್ಲ ಮಠಗಳ ಶಿವಾಚಾರ್ಯರು ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವೀರಶೈವ ಲಿಂಗಾಯತ ಒಂದೇ ಎನ್ನುವ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ತೀರ್ಮಾನದಡಿ ಕಾರ್ಯ ನಿರ್ವಹಿಸಲು ಒಮ್ಮತ ವ್ಯಕ್ತವಾಯಿತು ಎಂದು ಪರಿಷತ್‌ನ ವಕ್ತಾರ ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಹರಕೆರೆಯ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಿವಾಚಾರ್ಯರ ಸಭೆಯು ಕೇಂದ್ರ ಸಮಿತಿ ಸಹ ಕಾರ್ಯದರ್ಶಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಥಮ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪಂಚಪೀಠಗಳಾದ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಪ್ರಾಚೀನ ಮೂಲ ಗುರು ಪರಂಪರೆಯನ್ನು ವ್ಯವಸ್ಥಿತವಾಗಿ ಪ್ರಚುರ ಪಡಿಸುವುದು. ಹಾನಗಲ್ ಕುಮಾರ ಶಿವಯೋಗಿಗಳು ನಿರೂಪಿಸಿದ ಚಿಂತನೆಗಳನ್ನು ಭಕ್ತಗಣಕ್ಕೆ ತಿಳಿಸುವುದು. ಕನಿಷ್ಠ ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲ ಶಿವಾಚಾರ್ಯರು ಸಮಾವೇಶಗೊಂಡು ಧರ್ಮ ಜಾಗೃತಿ ಚಿಂತನೆ ಮಾಡಿ ಅನುಷ್ಠಾನಗೊಳಿಸುವುದು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾದ್ಯಂತ ವರ್ಷದುದ್ದಕ್ಕೂ ಧರ್ಮ ಜಾಗೃತಿ ಸಮಾವೇಶ ಸಂಘಟಿಸುವ ನಿರ್ಣಯಗಳನ್ನು ಮಠಾಧೀಶರು ಕೈಗೊಂಡರು.