

ಶಿವಮೊಗ್ಗ: ಸತಿ ಪತಿ ಒಂದಾಗಿ ಬದುಕುವುದು ಈಶ್ವರನಿಗೆ ಅತ್ಯಂತ ಇಷ್ಟವಾದುದು. ಧರ್ಮ, ಅರ್ಥ, ಕಾಮದಲ್ಲಿ ಸತಿ-ಪತಿ ಮಧ್ಯೆ ಹೊಂದಾಣಿಕೆ ಅಗತ್ಯ. ಅದು ನೆಮ್ಮದಿ ಮತ್ತು ಸುಖಕರ ಜೀವನಕ್ಕೆ ದಾರಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ 26ನೇ ವಾರ್ಷಿಕೋತ್ಸವ ಸಮಾರಂಭ ನಿಮಿತ್ತ ಬುಧವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪುರುಷನ ಯಶಸ್ಸಿನ ಹಿಂದೆ ತಾಯಿ ಅಥವಾ ಪತ್ನಿಯ ಬೆಂಗಾವಲಿರುತ್ತದೆ. ಧರ್ಮದ ವಿಚಾರದಲ್ಲಿ ಸತಿ-ಪತಿ ಜತೆಯಾಗಿರಬೇಕು. ಹಾಗೆಯೇ ಹಣಕಾಸಿನ ವಿಷಯ, ಎಲ್ಲ ವ್ಯವಹಾರಗಳು ಗಂಡ-ಹೆಂಡತಿ ಮಧ್ಯೆ ಗುಟ್ಟಾಗಿರಬಾರದು. ಮನೆಯ ಅವಶ್ಯಕತೆಗಳ ಬಗ್ಗೆ ಇಬ್ಬರ ನಡುವೆ ಹೊಂದಾಣಿಕೆ ಇರಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಈವರೆಗೂ ನಡೆಸಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 600ಕ್ಕೂ ಹೆಚ್ಚು ದಂಪತಿ ಬದುಕಿನ ಭವ್ಯ ಬಂಧನಕ್ಕೆ ಒಳಗಾಗಿದ್ದಾರೆ. ಇಲ್ಲಿ ವಿವಾಹ ಆಗುವ ಎಲ್ಲರೂ ಉತ್ತಮ ಜೀವನ ಸಾಗಿಸಬೇಕು. ಸಮಸ್ಯೆಗಳು ಬಂದಾಗ ದೊಡ್ಡದು ಮಾಡದೆ ಹೊಂದಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಅಗತ್ಯ ಬಿದ್ದರೆ ಶ್ರೀ ಮಠಕ್ಕೆ ಬಂದರೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಭಯ ನೀಡಿದರು.
ಶ್ರೇಷ್ಠ ಕವಿ ಕುವೆಂಪು ಅವರ ಜನ್ಮಭೂಮಿ ಇದು. ಈ ಭೂಮಿಯಲ್ಲಿ ಬದುಕುತ್ತಿರುವ ನೀವು ಪುಣ್ಯವಂತರು. ಕುವೆಂಪು ಕಟ್ಟಿಕೊಟ್ಟ ಸುಂದರ ಬದುಕು ನಿಮ್ಮದಾಗಬೇಕು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಿರಿಕಿರಿ ಆಗಬಾರದೆಂದು ಅತ್ಯಂತ ವಿಶೇಷ ಹಾಗೂ ಸರಳವಾಗಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.