

ಮುಂಬೈ: ಇತ್ತೀಚೆಗೆ ಕರ್ನಾಟಕದ ವಕೀಲೆಯೊಬ್ಬರು ಸಾಹಿತಿ ಭಗವಾನ್ ಮೇಲೆ ಕಪ್ಪು ಮಸಿ ಎರಚಿ ಸುದ್ದಿಯಾಗಿತ್ತು. ಇದೀಗ ಅದೇ ತರಹದ ಮತ್ತೊಂದು ಘಟನೆ ಮಹಾರಾಷ್ಟ್ರದ ಸೊಲಾಪುರದಲ್ಲಿ ವರದಿಯಾಗಿದೆ. ಆಡಳಿತದಲ್ಲಿರುವ ಶಿವಸೇನೆ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕನೊಬ್ಬನ ಮೇಲೆ ಕಪ್ಪು ಮಸಿ ಎರಚಿರುವುದಾಗಿ ಸುದ್ದಿಯಾಗಿದೆ.
ಭಾನುವಾರದಂದು ಇಂತದ್ದೊಂದು ಘಟನೆ ನಡೆದಿದೆ. ವೈಟ್ ಅಂಡ್ ವೈಟ್ ಧರಿಸಿರುವ ಒಂದಿಷ್ಟು ಜನರು ಓರ್ವ ವ್ಯಕ್ತಿಯನ್ನು ಸುತ್ತುವರೆದು, ಕಪ್ಪು ಮಸಿ ಎರಚುತ್ತಾರೆ. ಅದಾದ ಮೇಲೆ ಸೀರೆಯೊಂದನ್ನು ಆತನ ಹೆಗಲ ಮೇಲಿಟ್ಟು, ತೊಡುವಂತೆ ಆಗ್ರಹಿಸುತ್ತಾರೆ. ಈ ರೀತಿ ದಾಳಿ ನಡೆಸಿದವರು ಶಿವಸೇನೆಯ ಕಾರ್ಯಕರ್ತರು ಎನ್ನಲಾಗಿದೆ. ದಾಳಿಗೆ ಒಳಗಾದವ ಬಿಜೆಪಿ ನಾಯಕ ಶಿರೀಶ್ ಕಟೇಕರ್ ಎಂದು ಎಎನ್ಐ ವರದಿ ಮಾಡಿದೆ. ಆತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ತಿಳಿಸಲಾಗಿದೆ.
ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೋಲಾಪುರ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)