

ಮುಂಬೈ: ಬಿಜೆಪಿ ದೆಹಲಿ ಚುನಾವಣೆ ಎದುರಿಸಲು "ಕೋಮು ಧ್ರುವೀಕರಣ"ಕ್ಕೆ ಕೈ ಹಾಕಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ದೆಹಲಿ ವಿಧಾನಸಭೆ ಚುನಾವಣೆಯ ಮತದಾನಕ್ಕೆ 2 ದಿನ ಇರುವಾಗ ಬರೆದಿರುವ ಸಂಪಾದಕೀಯ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಮಹಾರಾಷ್ಟ್ರ ಕಳೆದುಕೊಂಡ ನಂತರ ಮತ್ತು ಜಾರ್ಖಂಡ್ನಲ್ಲಿ ಸೋಲು ಅನುಭವಿಸಿದ ಬಳಿಕ ದೆಹಲಿಯಲ್ಲಿ ಗೆಲ್ಲಲು ಪಣ ತೊಟ್ಟಿದ್ದಾರೆ. ಅವರು ಗೆಲ್ಲಲು ತೊಟ್ಟಿರುವ ಪಣ ತಪ್ಪಲ್ಲ. ಬಿಜೆಪಿಯ 200 ಸಂಸದರು, ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಇಟ್ಟು ತೂಗಿದರು ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಷ್ಟು ಭಾರ ತೂಗುವುದಿಲ್ಲ ಎಂದು ತೀಕ್ಷ್ಣವಾಗಿ ಸಂಪಾದಕೀಯದಲ್ಲಿ ಬರೆಯಲಾಗಿದೆ.
ದೆಹಲಿ ಸಿಎಂ ಕೇಜ್ರಿವಾಲ್ 5 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಮುಂದಿಟ್ಟು ಮತ ಯಾಚಿಸುತ್ತಿದ್ದರೆ, ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸೇರಿದಂತೆ ಇತರೆ ವಿಚಾರಗಳನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)