ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಶಿಶಿರ ಉತ್ಸವ: 2000 ವಿದ್ಯಾರ್ಥಿಗಳು ಭಾಗಿ

ವಿಜಯವಾಣಿ - 2024-12-24T180837.372
Published on

ಬೆಂಗಳೂರು: ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ 15ನೆಯ ಶಿಶಿರ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು. ಆರ್ಟ್ ಆಫ್ ಲಿವಿಂಗ್​ನ ಅಂತಾರಾಷ್ಟ್ರೀಯ ಕೇಂದ್ರದ ಬಳಿಯಿರುವ ಎಸ್.ಎಸ್.ಆರ್.ವಿ.ಎಂ ಗ್ರೌಂಡ್ ನಲ್ಲಿ ಭಾರತದ ಎಲ್ಲಾ ಎಸ್.ಎಸ್.ಆರ್.ವಿ.ಎಂ ಶಾಲಾ ಮಕ್ಕಳು ಭಾಗವಹಿಸಿದ್ದರು. ಭಾರತದ 50 ಎಸ್.ಎಸ್.ಆರ್.ವಿ ಎಂ ಶಾಲೆಗಳ 2000 ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟದಲ್ಲಿ ಭಾಗವಹಿಸಿದರು.

ಈ ಸಮಾರಂಭದ ಉದ್ಘಾಟನೆಯಲ್ಲಿ ಉಪಸ್ಥಿತರಾಗಿದ್ದ ಗಣ್ಯರೆಂದರೆ, ಆರ್ಟ್ ಆಫ್ ಲಿವಿಂಗ್ ನ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಆರೈಕೆಯ ಕಾರ್ಯಕ್ರಮಗಳ ನಿರ್ದೇಶಕಿ ಮತ್ತು ಪೂಜ್ಯ ಗುರುದೇವರ ಸಹೋದರಿಯಾಗಿರುವ ಶ್ರೀಮತಿ ಭಾನುಮತಿ ನರಸಿಂಹನ್, ಏಷ್ಯನ್ ಅಥ್ಲೆಟಿಕ್ಸ್​ನ ಪದವಿ ಪುರಸ್ಕೃತೆ ಶ್ರೀಮತಿ ಬಿಂದುರಾಣಿ. ಜಿ, ವೃತ್ತಿಪರ ಎಂಎಂಎ ಹೋರಾಟಗಾರ ಶ್ರೀ ಕಾಂತರಾಜ್ ಅಗಸ.

ಸಮಗ್ರ ಬೆಳವಣಿಗೆಗಾಗಿ ಒಂದು ವೇದಿಕೆ

ಎಸ್ ಎಸ್ ಆರ್ ವಿ ಎಂನ ಅಧ್ಯಕ್ಷರಾದ ಕಮೋಡರ್ ಹೆಚ್.ಜಿ. ಹರ್ಷರವರು, "ಶಿಶಿರ ಉತ್ಸವವು ತಂಡದ ಕಾರ್ಯಾಚರಣೆಯ, ಸಹಿಷ್ಣುತೆಯ, ಕ್ರೀಡಾಪಟುತ್ವದ ಉತ್ಸವ. ಜಯವು ಕೇವಲ ಗೆಲ್ಲುವುದರಲ್ಲಿ ಇಲ್ಲ. ಜಯವಿರುವುದು ಪಯಣದಲ್ಲಿ, ಸ್ನೇಹಶೀಲತೆಯಲ್ಲಿ, ದಾರಿಯಲ್ಲಿ ಕಲಿತ ಪಾಠದಲ್ಲಿ" ಎಂದರು. ಟ್ರಸ್ಟಿಯಾದ ಜೈನಾ ದೇಸಾಯಿಯವರು, "ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಪುಣರಾಗಿರುವ ವ್ಯಕ್ತಿತ್ವಗಳನ್ನು ಪೋಷಿಸಲು ನಾವು ಹೊಂದಿರುವ ಬದ್ಧತೆಯೇ ಈ ಉತ್ಸವ" ಎಂದರು.

ಉತ್ಸವದ ಮುಖ್ಯಾಂಶಗಳು

ಕಾರ್ಯಕ್ರಮವು ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಥ್ರೋಬಾಲ್, ಭಾರತದ ಪರಂಪರೆಯನ್ನು ಆಚರಿಸುವ ಕಲಾತ್ಮಕ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಸೇರಿದಂತೆ ವಿವಿಧ ಸ್ಪರ್ಧೆಗಳ ಅತ್ಯಾಕರ್ಷಕ ಮಿಶ್ರಣವನ್ನು ಒಳಗೊಂಡಿತ್ತು. ಚಿತ್ರಕಲಾ ಸ್ಪರ್ಧೆಯು ಎಸ್.ಎಸ್.ಆರ್.ವಿ.ಎಂ.ನ ಉದಯೋನ್ಮುಖ ಕಲಾವಿದರ ಸೃಜನಶೀಲ ಪ್ರತಿಭೆಯನ್ನು ಹೊರತಂದಿತು. ಯೋಗ ನೃತ್ಯ ಪ್ರದರ್ಶನವು ವಿದ್ಯಾರ್ಥಿಗಳ ಸಮನ್ವಯ, ಸಮತೋಲನ ಮತ್ತು ಮಾನಸಿಕ ಸಾಮರಸ್ಯವನ್ನು ಎತ್ತಿ ತೋರಿಸಿತು. ನೃತ್ಯ ಸ್ಪರ್ಧೆಯು ತನ್ನ ಶಕ್ತಿಭರಿತವಾದ ಮತ್ತು ಆಕರ್ಷಕವಾದ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಜಂಕ್ ಬ್ಯಾಂಡ್ ಸ್ಪರ್ಧೆಯು ಸೃಜನಾತ್ಮಕವಾಗಿ ಸಂಗೀತವನ್ನು ಸುಸ್ಥಿರತೆಯೊಂದಿಗೆ ಸಂಯೋಜಿಸಿತು.

ಡಿಸೆಂಬರ್ 21 ರಂದು, 2,000 ವಿದ್ಯಾರ್ಥಿಗಳು ‘ಗುರುದೇವರೊಂದಿಗೆ ವಿಶ್ವ ಧ್ಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಾಂತಿ ಮತ್ತು ಸಾಮರಸ್ಯದ ಅಲೆಗಳನ್ನು ಹರಡುವ ಮೂಲಕ ಈ ಉತ್ಸವವು ಮೊದಲ ‘ವಿಶ್ವ ಧ್ಯಾನ ದಿನ’ವನ್ನು ಗುರುತಿಸಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಸಂಘದ ಸನ್ಮಾನ್ಯ ಕಾರ್ಯದರ್ಶಿ ಪದ್ಮಶ್ರೀ ಕೆ.ವೈ. ವೆಂಕಟೇಶ್ ರವರು ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (2021) ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿರುವ ಪ್ರಸಿದ್ಧ ಪ್ಯಾರಾ-ಅಥ್ಲೀಟ್ ಶ್ರೀ ವೆಂಕಟೇಶ್ ಅವರು ತಮ್ಮ ಪಯಣದ ಬಗ್ಗೆ ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ಎಸ್ ಎಸ್ ಆರ್ ವಿ ಎಂ ಟ್ರಸ್ಟ್

ಗುರುದೇವ ಶ್ರೀ ಶ್ರೀ ರವಿಶಂಕರ್ ರವರಿಂದ 1999ರಲ್ಲಿ ಸ್ಥಾಪನೆಯಾದ ಎಸ್.ಎಸ್.ಆರ್.ವಿ.ಎಂ ಟ್ರಸ್ಟ್, ಒತ್ತಡ-ಮುಕ್ತ ವಾತಾವರಣದಲ್ಲಿ ಮೌಲ್ಯಾಧಾರಿತ, ಸಮಗ್ರ ಶಿಕ್ಷಣವನ್ನು ಉತ್ತೇಜಿಸುತ್ತದೆ. ವಿಶ್ವವಿದ್ಯಾನಿಲಯ, ಆಯುರ್ವೇದ ಕಾಲೇಜುಗಳು ಮೊದಲಾದವುಗಳನ್ನು ಒಳಗೊಂಡಂತೆ 120ಕ್ಕೂ ಹೆಚ್ಚು ಸಂಸ್ಥೆಗಳನ್ನು ನಿರ್ವಹಿಸುತ್ತಿರುವ ಟ್ರಸ್ಟ್ ಪ್ರಸ್ತುತ 60,000 ವಿದ್ಯಾರ್ಥಿಗಳ ಜೀವನದಲ್ಲಿ ಪ್ರಭಾವ ಬೀರಿದ್ದು, ಜಾಗತಿಕವಾಗಿ 5 ಲಕ್ಷಕ್ಕಿಂತಲೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಜಾಲವನ್ನು ಹೊಂದಿದೆ.

‘ಶಿಶಿರ ಉತ್ಸವ 2024’

ಉತ್ಸವವು, ಪ್ರತಿಭೆಯನ್ನು ಪೋಷಿಸುವಲ್ಲಿ, ಸೌಹಾರ್ದತೆಯನ್ನು ಬೆಳೆಸುವಲ್ಲಿ ಮತ್ತು ವೈವಿಧ್ಯಮಯ ವಿಭಾಗಗಳಲ್ಲಿ ಉತ್ಕೃಷ್ಟತೆಯನ್ನು ಮೆರೆಯುವಲ್ಲಿ ಎಸ್.ಎಸ್.ಆರ್.ವಿ.ಎಂನ ಬದ್ಧತೆಯನ್ನು ಒತ್ತಿಹೇಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net