

ಶಿರಸಿ: ರಾಜ್ಯದ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಪೂರ್ವವಿಧಿವಿಧಾನಗಳೊಂದಿಗೆ ಮಂಗಳವಾರ ಆರಂಭವಾಗಿದೆ. ನಸುಕಿನಲ್ಲಿ ಕಲಶ ಪೂಜೆ, ದೇವಾಲಯದ ಎದುರಿನ ರಥದ ತುದಿಯಲ್ಲಿ ಕಲಶ ಆರೋಹಣದ ವಿಧಿವಿಧಾನವನ್ನು ಮಧ್ಯಾಹ್ನ 12.43ರ ಮುಹೂರ್ತದಲ್ಲಿ ನೆರವೇರಿಸಲಾಯಿತು.
ಭಾವಪರವಶಗೊಂಡ ಕೆಲ ಭಕ್ತರು ರಥದ ಎದುರು ಕುಣಿದರು. ಭಕ್ತರ ಜಯಘೊಷದ ನಡುವೆ ಮರಾಠಿ ಬಾಬುದಾರರು ಕಲಶವನ್ನು ರಥಕ್ಕೆ ಜೋಡಿಸಿದರು. ನಂತರ ರಥ ಅಲಂಕರಿಸುವ ಕಾರ್ಯದಲ್ಲಿ ನಿರತರಾದರು.
ಶೋಭಾಯಾತ್ರೆ ಇಂದು: ದೇವಾಲಯದಿಂದ ಅರ್ಧ ಕಿಮೀ ದೂರದ ಬಿಡ್ಕಿಬಯಲಿನ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ ಕಾರ್ಯ ಮಾ.4ರ ಬೆಳಗ್ಗೆ ನೆರವೇರಲಿದೆ. ಇದಕ್ಕೂ ಮುನ್ನ ಮಾರಿಕಾಂಬಾ ದೇವಿ ರಥಾರೋಹಣ, ಸಹಸ್ರಾರು ಭಕ್ತರ ಭಕ್ತಿ ಸಂಭ್ರಮದ ಮಧ್ಯ ರಥೋತ್ಸವ ನಡೆಯಲಿದೆ.