

ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ) ಹೈನುಗಾರರಿಗೆ ಶಾಕ ನೀಡಿದೆ. ಹಾಲು ಖರೀದಿ ದರವನ್ನು 90 ಪೈಸೆ ಇಳಿಸುವುದರೊಂದಿಗೆ ಹಾಲು ಉತ್ಪಾದಕರಿಗೆ ಆಶ್ಚರ್ಯ ಮೂಡಿಸಿದೆ.
ಈಗಾಗಲೇ ಹಾಲು ಮಾರಾಟ ದರವನ್ನು ಸರ್ಕಾರ ಹೆಚ್ಚಿಸಿದೆ. ಆದರೆ ಇದರಿಂದ ಹೈನುಗಾರರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ಸಕಾಲದಲ್ಲಿ ಹಾಲಿನ ಪ್ರೋತ್ಸಾಹ ಧನವೂ ಬಿಡುಗಡೆಯಾಗುತ್ತಿಲ್ಲ. ಇದರ ನಡುವೆಯೇ ಖರೀದಿ ದರ ಇಳಿಕೆ ಮಾಡಿರುವುದು ಹೈನುಗಾರರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಶಿಮುಲ್ ಏಳು ಕೋಟಿ ರೂ. ನಷ್ಟದಲ್ಲಿದೆ. ಅದನ್ನು ಸರಿದೂಗಿಸಲು ಹಾಲು ಖರೀದಿ ದರ ಇಳಿಕೆ ಮಾಡಲಾಗಿದೆ ಎಂದು ಶಿಮುಲ್ ಅಧ್ಯಕ್ಷರು ಹೇಳಿದ್ದಾರೆ. ಕೆಲ ತಿಂಗಳು ಆಡಳಿತ ಮಂಡಳಿ ಇರಲಿಲ್ಲ. ಹಾಲಿನ ದರ ಪರಿಷ್ಕರಣೆ ಸಂಬಂಧ ಯಾವುದೇ ತೀರ್ಮಾನ ಆಗಿರಲಿಲ್ಲ. ನಮ್ಮ ಆಡಳಿತ ಮಂಡಳಿ ಬರುವ ಹೊತ್ತಿಗೆ 7 ಕೋಟಿ ರೂ. ನಷ್ಟದಲ್ಲಿತ್ತು. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಖರೀದಿ ದರ ಇಳಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ವಿಧ್ಯಾದರ ತಿಳಿಸಿದ್ದಾರೆ. ಇದುವರೆಗೆ ಪ್ರತಿ ಕೆಜಿ ಹಾಲಿಗೆ 33.03 ರೂ.ನಂತೆ ಖರೀದಿ ಮಾಡಲಾಗುತ್ತಿತ್ತು. ನೂತನ ದರ ಅ.1ರಿಂದಲೇ ಜಾರಿಗೆ ಬಂದಿದೆ.
ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿದಿನ 7.17 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಶೇಖರಣೆಯಾಗುತ್ತಿದೆ. ಈ ಪೈಕಿ 3.49 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟವಾಗುತ್ತಿದೆ. ನೆರೆ ರಾಜ್ಯಗಳಿಗೆ 1.34 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. 2.20 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲು ಕಳುಹಿಸಲಾಗುತ್ತಿದೆ.