ತಿಂಗಳಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ

water
Published on

ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರು ಯೋಜನೆಯ ಅನುಷ್ಠಾನದ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಇಂಜಿನಿಯರ್‌ಗಳಿಗೆ ಗಡುವು ನೀಡಿದ್ದಾರೆ.

ಯೋಜನೆಯ ಬಗ್ಗೆ ಸತತವಾಗಿ ಅಧಿಕಾರಿಗಳ ಗಮನಸೆಳೆದು, ಲೋಪಗಳನ್ನು ಅನಾವರಣಗೊಳಿಸುತ್ತಿರುವ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಪ್ರಮುಖರು ಹಾಗೂ ಇಂಜಿನಿಯರ್‌ಗಳ ತಂಡವನ್ನು ರಚಿಸಲಾಗುತ್ತಿದೆ. ವೇದಿಕೆ ಪ್ರಮುಖರು ಗುರುತಿಸಿರುವ ಸಮಸ್ಯೆಗಳನ್ನು, ಅವೈಜ್ಞಾನಿಕ ಕಾಮಗಾರಿಗಳನ್ನು ಇಂಜಿನಿಯರ್‌ಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಈಶ್ವರಪ್ಪ ಗುರಿ ನಿಗದಿಪಡಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಪಾಲಿಕೆ, ಕೆಯುಡಬ್ಲುೃಎಸ್ ಅಧಿಕಾರಿಗಳು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರ ಸಭೆ ನಡೆಸಿದ ಈಶ್ವರಪ್ಪ, ಕುಡಿಯುವ ನೀರು ಯೋಜನೆಯ ಬಗೆಗಿನ ದೂರುಗಳನ್ನು ಆಲಿಸಿದರು. ಈ ವೇಳೆ ವೇದಿಕೆ ಪ್ರಮುಖರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯವೈಖರಿಗೆ ತೀವ್ರ ಆಕೇಪ ವ್ಯಕ್ತಪಡಿಸಿದರು.

ಮೂರು ವರ್ಷಗಳ ಹಿಂದೆ ಕುಡಿಯುವ ನೀರು ಯೋಜನೆಗೆ ಅಳವಡಿಸಿದ್ದ ಜಿಐ ಪೈಪ್ ಈಗಾಗಲೇ ತುಕ್ಕು ಹಿಡಿದಿದೆ. ಜನರು ತುಕ್ಕಿನ ಅಂಶ ಒಳಗೊಂಡಿರುವ ನೀರನ್ನು ಕುಡಿಯುವಂತಾಗಿದೆ. ಕಾಮಗಾರಿ ಆರಂಭಿಸುವ ಸಂದರ್ಭದಲ್ಲೇ ಜಿಐ ಪೈಪ್ ಅಳವಡಿಕೆಗೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಆದರೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ವಾರದಲ್ಲಿ ಒಂದು ದಿನ ಒಕ್ಕೂಟದ ಪ್ರಮುಖರು, ನೀರು ಸರಬರಾಜು ಮಂಡಳಿ ಇಂಜಿನಿಯರ್‌ಗಳು ಜಂಟಿ ಪರಿಶೀಲನೆ ನಡೆಸಬೇಕು. ಈಗಾಗಲೇ ಸಂಪರ್ಕ ನೀಡಿರುವ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಏನಾದರೂ ಸಮಸ್ಯೆಗಳಿವೆ ಎಂಬುದನ್ನು ಅರಿಯಬೇಕು. ಒಂದು ವೇಳೆ ಸಮಸ್ಯೆ ಕಂಡು ಬಂದರೆ ಕೂಡಲೇ ಅದಕ್ಕೆ ಪರಿಹಾರ ಸೂಚಿಸಬೇಕೆಂದು ಈಶ್ವರಪ್ಪ ತಿಳಿಸಿದರು.

ನಗರ ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಪ್ರಭಾಕರ್, ಆಯುಕ್ತ ಕೆ.ಮಾಯಣ್ಣ ಗೌಡ, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರಮುಖರಾದ ಡಾ.ಶೇಖರ್ ಗೌಳೇರ್, ಎಸ್.ಬಿ.ಅಶೋಕ್‌ಕುಮಾರ್, ಜನಮೇಜಿರಾವ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net