ಹಕ್ಕುಪತ್ರಕ್ಕೆ ಒತ್ತಾಯ: ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ

ccf
Published on

ಶಿವಮೊಗ್ಗ: ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಜಿಲ್ಲೆಯ 4,300 ಸಣ್ಣ ಹಿಡುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಇವರೆಲ್ಲರೂ 1978ಕ್ಕೂ ಪೂರ್ವದಿಂದಲೇ ಸಾಗುವಳಿ ಮಾಡುತ್ತಿದ್ದಾರೆ. ಹಕ್ಕುಪತ್ರ ನೀಡುವ ಮೂಲಕ ಸರ್ಕಾರದ ಆದೇಶ ಪಾಲನೆ ಮಾಡುವಂತೆ ಒತ್ತಾಯಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ನೇತೃತ್ವದಲ್ಲಿ ಸಾಗರ, ಭದ್ರಾವತಿ, ಸೊರಬ ತಾಲೂಕಿನ ರೈತರು ಮಂಗಳವಾರ ಮನವಿ ಸಲ್ಲಿಸಿದರು.

ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಇದುವರೆಗೆ ಸರ್ಕಾರ 9 ಆದೇಶಗಳನ್ನು ಮಾಡಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸಾಗುವಳಿದಾರರು ಆತಂಕ ಎದುರಿಸುವಂತಾಗಿದೆ. ಈ ಹಿಂದೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಕೆಲವು ಸಾಗುವಳಿದಾರರನ್ನು ಕೈ ಬಿಡಲಾಗಿದೆ. ಹೀಗಾಗಿ ಹೊಸಪಟ್ಟಿ ಸಿದ್ಧಪಡಿಸಿ ಅರ್ಹರ ಹೆಸರನ್ನು ಸೇರಿಸಬೇಕೆಂದು ಆಗ್ರಹಿಸಿದರು.

ಸರ್ಕಾರದ ಆದೇಶವನ್ನು ಜಾರಿಗೆ ತರದೇ ಅಧಿಕಾರಿಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರಗಳು ಈ ವಿಷಯವನ್ನು ಪರಿಗಣಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ. ಇದರಿಂದ ಭೂಮಿ ಹಕ್ಕು ಸಿಗದೇ ರೈತರು ಕಂಗಾಲಾಗಿದ್ದಾರೆ. ಹಿಂದಿನ ಬಾರಿ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಮಲೆನಾಡು ರೈತರ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿ ಅಧಿಕಾರಿಗಳ ವಿಶೇಷ ಸಭೆ ಕರೆಯುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೂ ಸಭೆ ನಡೆಸಿಲ್ಲ ಎಂದು ದೂರಿದರು.

ಮುಂದಿನ ತಿಂಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಅವರು ಮಲೆನಾಡು ರೈತರ ಸಮಸ್ಯೆಗಳನ್ನು ಪರಿಹರಿಸದೇ ಇದ್ದರೆ ಕಾಮಗಾರಿಗಳ ಉದ್ಘಾಟನೆ ಮಾಡುವ ನೈತಿಕತೆ ಅವರಿಗೆ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಆರ್.ಟಿ.ನಟರಾಜ್, ಪರಶುರಾಮ, ಷಣ್ಮುಖ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net