

ಶಿವಮೊಗ್ಗ: ಶರಾವತಿ ಸಂತ್ರಸ್ತರ ಪುನರ್ವಸತಿಗೆಂದು ಡಿನೋಟಿಫೈ ಆಗಿರುವ ಜಮೀನು ಮಂಜೂರು ಮಾಡಲು 15 ದಿನಗಳೊಳಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕೆಂದು ಒತ್ತಾಯಿಸಿ ಶರಾವತಿ ಹಿನ್ನೀರಿನ ರೈತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬೇಡಿಕೆ ಈಡೇರದೇ ಇದ್ದರೆ ಕಾನೂನುಭಂಗ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವಾಗ ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿರುವ ಹೈಕೋರ್ಟ್ ಭೂಮಿ ಹಂಚಿಕೆಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಕೇಂದ್ರದ ಅನುಮತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾನೂ ಶರಾವತಿ ಸಂತ್ರಸ್ತ ಎಂದು ಹೇಳಿಕೊಳ್ಳುವ ಶಾಸಕ ಹರತಾಳು ಹಾಲಪ್ಪ ಅವರು ಈ ವಿಷಯದಲ್ಲಿ ಗಂಭೀರವಾಗಿ ನಡೆದುಕೊಳ್ಳುತ್ತಿಲ್ಲ. ಶಾಸಕರ ವೇತನ ಹೆಚ್ಚಳ ಮಾಡುವ ಬಗ್ಗೆ ಸದನದಲ್ಲಿ ಚರ್ಚಿಸುವ ಸರ್ಕಾರ ಶರಾವತಿ ಸಂತ್ರಸ್ತರ ಬಗ್ಗೆ ಸಮಗ್ರ ಚರ್ಚೆ ನಡೆಸದೇ ಇರುವುದು ವಿಪರ್ಯಾಸ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
ನೀಡಿರುವ ಹಕ್ಕುಪತ್ರಗಳನ್ನು ರದ್ದುಪಡಿಸಿ ಆರ್‌ಟಿಸಿಯಲ್ಲಿ ಅರಣ್ಯ ಎಂದು ನಮೂದಿಸುವುದಾಗಿ ಅರಣ್ಯ ಇಲಾಖೆ ಹೇಳುತ್ತಿರುವುದು ಸಂತ್ರಸ್ತರ ಆತಂಕ ಹೆಚ್ಚಲು ಕಾರಣವಾಗಿದೆ. ಪುನರ್ವಸತಿಗಾಗಿ ಕಂದಾಯ ಇಲಾಖೆಗೆ ಹಸ್ತಾಂತರವಾಗಿರುವ ಭೂಮಿಯ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಎಂ.ಬಿ.ರಾಜಪ್ಪ, ತೀ.ನ.ಶ್ರೀನಿವಾಸ್, ಪ್ರಮುಖರಾದ ಎಸ್.ಪಿ.ಧರ್ಮರಾಜ್, ನಾರಾಯಣಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.