ಮೂರು ತಿಂಗಳಲ್ಲಿ ಫೈ ಓವರ್ ಪೂರ್ಣ

FLY OVER
Published on

ಶಿವಮೊಗ್ಗ: ನಗರದಲ್ಲಿ ಮೂರು ರೈಲ್ವೆ ಮೇಲ್ಸೆತುವೆಗಳ ಕಾಮಗಾರಿ ಭರದಿಂದ ಸಾಗಿದೆ. ಇನ್ನು ಮೂರು ತಿಂಗಳಲ್ಲಿ ಯೋಜನೆ ಸಂಪೂರ್ಣಗೊಂಡು ವಾಹನಗಳ ಓಡಾಟಕ್ಕೆ ಇವು ಮುಕ್ತವಾಗಲಿದೆ. ಅದರೊಂದಿಗೆ ರೈಲ್ವೆ ಕ್ರಾಸಿಂಗ್ ಕಿರಿಕಿರಿಯಿಂದ ಜನರಿಗೆ ಮುಕ್ತಿ ಸಿಗಲಿದೆ.

ಕಾಶೀಪುರ, ಸವಳಂಗ ರಸ್ತೆ, ಹೊಳೆಹೊನ್ನೂರು ರಸ್ತೆಯಲ್ಲಿ ಏಕಕಾಲಕ್ಕೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು ವಿಶೇಷವಾಗಿದೆ. ಮಳೆಗಾದಲ್ಲೂ ಕಾಮಗಾರಿ ಕುಂಠಿತವಾಗದೇ ನಿಗದಿತ ಅವಧಿಯಲ್ಲಿ ಫ್ಲೈ ಓವರ್ ಮುಗಿಸುವತ್ತ ಇಂಜಿನಿಯರ್ ಹಾಗೂ ಗುತ್ತಿಗೆದಾರರು ದಾಪುಗಾಲು ಇರಿಸಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲೇ ನಾಗರಿಕರ ಬಹು ವರ್ಷದ ಬೇಡಿಕೆ ಈಡೇರಲಿದೆ. ಸುಗಮ ವಾಹನ ಸಂಚಾರಕ್ಕೆ ಪೂರಕವಾಗಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಯಿಂದ ಜನರಿಗೆ ರೈಲ್ವೆ ಕ್ರಾಸಿಂಗ್‌ಗಲ್ಲಿ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ತಪ್ಪಲಿದೆ.

ಕಳೆದ ಏಳೆಂಟು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆ ರೈಲ್ವೆ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದಿದೆ. ದಶಕಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ರೈಲು ಸಂಚಾರ ಈಗ ಹೆಚ್ಚಿದೆ. ದಿನವೊಂದಕ್ಕೆ 20ಕ್ಕೂ ಹೆಚ್ಚು ರೈಲುಗಳು ಶಿವಮೊಗ್ಗ ನಿಲ್ದಾಣದ ಮೂಲಕ ಸಂಚರಿಸುತ್ತವೆ. ಪ್ರತಿ ಬಾರಿ ರೈಲ್ವೆ ಕ್ರಾಸಿಂಗ್ ಬಂದ್ ಆದಾಗಲೂ ವಾಹನಗಳು ಕಿಮೀಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿಯಿದೆ.

ಹೀಗಾಗಿ ನಗರದ ಪ್ರಮುಖ ಕ್ರಾಸಿಂಗ್‌ಗಳಲ್ಲಿ ರೈಲ್ವೆ ಮೇಲ್ಸೇತುವೆ ಇಲ್ಲವೇ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂಬ ಒತ್ತಡ ಕೇಳಿ ಬರುತ್ತಿತ್ತು. ಇದಕ್ಕೆ ಪೂರಕವಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರೈಲ್ವೆ ಸಚಿವರೊಂದಿಗೆ ನಿರಂತರ ಸಂವಹನ ಸಾಧಿಸಿ ನಗರಕ್ಕೆ ಅವಶ್ಯಕವಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಅನುಷ್ಟಾನವಾಗುವಲ್ಲಿ ಯಶಸ್ವಿಯಾಗಿದ್ದಾರೆ.

ವಿನೂತನ ವಯಾಡೆಕ್ಟ್ ಮೇಲ್ಸೇತುವೆ

ಶಿವಮೊಗ್ಗದಿಂದ ಚನ್ನಗಿರಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗದಲ್ಲಿರುವ ವಿದ್ಯಾನಗರದ ರೈಲ್ವೆ ಕ್ರಾಸಿಂಗ್‌ನಿಂದ ವಾಹನ ಸಂಚಾರಕ್ಕೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ವಿದ್ಯಾನಗರದಲ್ಲಿ 43.89 ಕೋಟಿ ರೂ. ವೆಚ್ಚದ ವಿನೂತನ ಮಾದರಿಯಲ್ಲಿ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಸವಳಂಗ ರಸ್ತೆ ಹಾಗೂ ಕಾಶೀಪುರದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಗಳು ನೇರವಾಗಿದ್ದಾರೆ. ವಿದ್ಯಾನಗರದ ಸೇತುವೆ ವಿಭಿನ್ನ ರೀತಿಯಲ್ಲಿ ನಿರ್ಮಾಣವಾಗುತ್ತಿದೆ.

ಈ ಮಾದರಿಯನ್ನು ವಯಾಡೆಕ್ಟ್ ಎಂದು ಕರೆಯಲಾಗುತ್ತದೆ. ಈ ಮೇಲ್ಸೇತುವೆ 900 ಮೀಟರ್ ಉದ್ದವಿದೆ. 17 ಪಿಲ್ಲರ್‌ಗಳ ಮೇಲೆ ಇದು ನಿರ್ಮಾಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net