ಸ್ವಚ್ಛತೆ ರಾಜ್ಯಕ್ಕೆ ಶಿವಮೊಗ್ಗವೇ ಟಾಪ್

palike
Published on

ಶಿವಮೊಗ್ಗ: ಕೇಂದ್ರ ಸರ್ಕಾರದ ಸ್ವಚ್ಛ ಸವೇಕ್ಷಣ್ ಪ್ರಶಸ್ತಿಗೆ ಈ ಬಾರಿ ಶಿವಮೊಗ್ಗ ನಗರ ಪಾಲಿಕೆ ಆಯ್ಕೆಯಾಗಿದ್ದು, ಕೇಂದ್ರದ ಸಮೀಕ್ಷೆ ಪ್ರಕಾರ ರಾಜ್ಯದಲ್ಲೇ ಶಿವಮೊಗ್ಗ ನಗರ ಪಾಲಿಕೆ ಸ್ವಚ್ಛತೆಯ ನಿರ್ವಹಣೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅ.1ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್ ಸುನೀತಾ ಅಣ್ಣಪ್ಪ, ಘನತ್ಯಾಜ್ಯ ವಸ್ತು ನಿರ್ವಹಣೆ -2016ರ ಅನ್ವಯ ವಿನೂತನ ತಂತ್ರಜ್ಞಾನಗಳ ಬಳಕೆ ಮೂಲಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಪಾಲಿಕೆಗೆ ಈ ಗೌರವ ಸಂಧಿದೆ. ಪೌರ ಕಾರ್ಮಿಕರು, ನಗರ ಪಾಲಿಕೆ ಸಿಬ್ಬಂದಿ ಶ್ರಮ, ನಗರ ಪಾಲಿಕೆ ಸದಸ್ಯರ ಆಸಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ. ಇನ್ನೂ ಕೆಲವು ಸಣ್ಣಪುಟ್ಟ ನ್ಯೂನತೆಗಳಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.

ಕೆಲ ವರ್ಷಗಳ ಹಿಂದೆ ಪ್ರತಿ ದಿನ 120 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿತ್ತು. ಪ್ರಸ್ತುತ 190 ಟನ್ ಸಂಗ್ರಹ ಮಾಡಲಾಗುತ್ತಿದೆ. ಆದರೂ 20-30 ಟನ್ ಕಸ ಸಂಗ್ರಹಣೆ ವಾಹನಕ್ಕೆ ಸಿಗುತ್ತಿಲ್ಲ. ನಿರಂತರವಾಗಿ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸುಮಾರು 200 ಪೌರ ಕಾರ್ಮಿಕರ ಕೊರತೆಯೂ ನಮಗೆ ಹಿನ್ನಡೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net