

ಶಿವಮೊಗ್ಗ:ಶಿಕ್ಷಣ, ಆಡಳಿತ ಹಾಗೂ ಉದ್ಯೋಗದಲ್ಲಿ ಕನ್ನಡಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಕರಡು ಸಿದ್ಧವಾಗಿದೆ. ಮುಂಬರುವ ಅಧಿವೇಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸುವ ನಿರೀಕ್ಷೆಯಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.
ನಮ್ಮ ಪ್ರಾಧಿಕಾರದಿಂದ ಸಾಕಷ್ಟು ಅಧ್ಯಯನ ನಡೆಸಿ ಕರಡು ರೂಪಿಸಿದ್ದೇವೆ. ಕನ್ನಡದ ಕೆಲಸಕ್ಕೆ ಕಾನೂನಿನ ಅಸ್ತ್ರ ದೊರೆಯಲಿ ಎಂಬುದಷ್ಟೇ ನಮ್ಮ ಅಭಿಲಾಷೆ. ಇದರಿಂದ ಸರೋಜಿನಿ ಮಹಿಷಿ ವರದಿಗೂ ಬಲ ಸಿಗುತ್ತದೆ ಎಂದು ಗುರುವಾರ ಮಾಧ್ಯಮ ಸಂವಾದದಲ್ಲಿ ಅಭಿಪ್ರಾಯಪಟ್ಟರು.
ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ಅದರ ಶಕ್ತಿ ವೃದ್ಧಿಯಾಗುತ್ತದೆ. ಭಾಷೆಯ ಬಗ್ಗೆ ಒಲವು ಹೆಚ್ಚುತ್ತದೆ. ಕನ್ನಡದಲ್ಲಿ ಪದವಿ ಪಡೆದವರೂ ಬೇರೆ ಭಾಷೆಗಳನ್ನು ಕಲಿತಾಗ ಉದ್ಯೋಗ ಅವಕಾಶ ಹೆಚ್ಚುತ್ತದೆ. ಇಂದು ಅನುವಾದಕರಿಗೆ ಸಾಕಷ್ಟು ಬೇಡಿಕೆಯಿದೆ. ಅನ್ಯ ಭಾಷೆಯ ಮೇಲೆ ಹಿಡಿತ ಸಾಧಿಸುವ ಜತೆಗೆ ಕೌಶಲಗಳನ್ನೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ಸಾಕಷ್ಟು ಕೆಲಸ ಮಾಡಿದೆ ಎಂದರು.
ಪ್ರಾಧಿಕಾರದಿಂದ ಪದ ಕಣಜ ರೂಪಿಸಿದ ಮೇಲೆ ಇ-ಆಡಳಿತ ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ ಕನ್ನಡಕ್ಕೆ ಎದುರಾಗಿರುವ ಕೆಲವು ಮೂಲ ಸಮಸ್ಯೆಗಳನ್ನು ನಾವು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅಂಗನವಾಡಿಯಲ್ಲಿ ಇಂಗ್ಲೀಷ್ ಕಲಿಕೆ ಕಡ್ಡಾಯಗೊಳಿಸಿದರೆ ಕನ್ನಡಕ್ಕೆ ಮಾರಕವಾಗುತ್ತದೆ. ಹೀಗಾಗಿ 1-8ನೇ ತರಗತಿವರೆಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ಕನ್ನಡವನ್ನು ಕೇವಲ ಕಲಿಕೆಗೆ ಸೀಮಿತಗೊಳಿಸುವ ಬದಲು ಅಂಕ ಗಳಿಕೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಉಪಸ್ಥಿತರಿದ್ದರು.