ಜೆಜೆಎಲ್ ಕಾಮಗಾರಿಗೆ ಆದ್ಯತೆ ನೀಡಿ

DISHA
Published on

ಶಿವಮೊಗ್ಗ: ಯಾರೂ ನಿರೀಕ್ಷಿಸಿರದಷ್ಟು ಅನುದಾನ ಜೆಜೆಎಲ್(ಜಲ ಜೀವನ ಮಿಷನ್) ಮೂಲಕ ದೊರೆತಿದೆ. ಆದರೆ ಕೆಲವೆಡೆ ಕಾಮಗಾರಿ ಸಂದರ್ಭದಲ್ಲಿ ಗುತ್ತಿಗೆದಾರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟು ಮಾಡುತ್ತಿದ್ದಾರೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

ಮಂಗಳವಾರ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಪೈಪ್‌ಲೈನ್ ಅಳವಡಿಕೆ ಸಂದರ್ಭದಲ್ಲಿ ರಸ್ತೆಗಳಿಗೆ ಹಾನಿ ಉಂಟಾಗುತ್ತಿದೆ. ಜಿಪಂ ಸಿಇಒ ಇದನ್ನು ಗಮನಿಸಿ ಕಾಮಗಾರಿ ಕೈಗೊಂಡಿರುವ ಏಜೆನ್ಸಿಗಳ ಪ್ರಮುಖರು ಸಭೆ ಕರೆದು ಸೂಕ್ತ ತಿಳುವಳಿಕೆ ನೀಡಬೇಕೆಂದರು.

ಜೆಜೆಎಲ್ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಅನುಷ್ಟಾನವಾಗುತ್ತಿಲ್ಲ. ಅನುದಾನವಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಸ್ಮಾರ್ಟ್ ಸಿಟಿಯಂತೆ ಹಳ್ಳಿಗಳೂ ಸ್ಮಾರ್ಟ್ ಆಗಬೇಕು. ಉದ್ಯೋಗಖಾತ್ರಿಯಲ್ಲಿ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಗ್ರಾಮೀಣ ಭಾಗದಲ್ಲಿ ಮನೆಗಳ ಕಸ ಸಂಗ್ರಹಣೆ ಜತೆಗೆ ಸಾರ್ವಜನಿಕ ಸ್ಥಳದಲ್ಲೂ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಗ್ರಾಮ ಮಟ್ಟದಲ್ಲೇ ಯೋಜನೆ ಸಿದ್ಧಪಡಿಸಬೇಕೆಂದು ಬಿವೈಆರ್ ತಿಳಿಸಿದರು.

ಶಾಸಕ ಕೆ.ಬಿ.ಅಶೋಕ ನಾಯ್ಕ, ಮೇಯರ್ ಸುನೀತಾ ಅಣ್ಣಪ್ಪ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net