

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನ್ನು ಐದು ಕೋಟಿ ರೂ. ವೆಚ್ಚದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಫ್ರೀಡಂ ಪಾರ್ಕ್ ನಿರ್ವಹಣೆ ಸಂಬಂಧ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಪಾರ್ಕ್‌ನ್ನು ಸಮಗ್ರ ಅಭಿವೃದ್ಧಿಪಡಿಸಿ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎರಡು ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಯತ್ನದಿಂದ ಕಾರಾಗೃಹದ 45 ಎಕರೆ ಜಾಗ ಸಾರ್ವಜನಿಕರ ಬಳಕೆಗೆ ದೊರೆತಿದೆ. ಇದನ್ನು ಜತನದಿಂದ ಕಾಯ್ದುಕೊಂಡು ಸುಂದರವಾಗಿ ರೂಪಿಸಬೇಕಾದ್ದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಗಮನಹರಿಸಲಾಗುವುದು. ೀಗಾಗಲೇ ಸ್ಮಾರ್ಟ್ ಸಿಟಿಯಿಂದ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಆದರೂ ಕೆಲವೊಂದು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ರಾತ್ರಿ 8ರ ಬಳಿಕ ನಿರ್ಬಂಧ
ಫ್ರೀಡಂ ಪಾರ್ಕ್‌ನಲ್ಲಿ ರಾತ್ರಿ 8ರ ಬಳಿಕ ವಾಯುವಿಹಾರಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಇಲ್ಲಿ ನಿರ್ಮಿಸಿರುವ ಶೌಚಗೃಹಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ವಚ್ಛತೆ, ವಾಯುವಿಹಾರಕ್ಕೆ ಪ್ರತ್ಯೇಕ ಪಥ, ಕುಡಿಯುವ ನೀರು, ಶೌಚಗೃಹ ನಿರ್ಮಿಸಲಾಗಿದೆ. ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಅಭಿಪ್ರಾಯದಂತೆ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಬಿವೈಆರ್ ಹೇಳಿದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ನಾಗರಾಜ ಕಂಕಾರಿ, ಇ.ವಿಶ್ವಾಸ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಬಳ್ಳೇಕೆರೆ ಸಂತೋಷ್,ಬಳ್ಳೇಕೆರೆ ಸಂತೋಷ್, ಮಾಲತೇಶ್, ರಾಜೇಶ್ ಕಾಮತ್, ದಿವಾಕರ ಶೆಟ್ಟಿ ಮುಂತಾದವರಿದ್ದರು.