

ಶಿವಮೊಗ್ಗ: ಭಾರತದಲ್ಲಿ ಹೆಣ್ಣನ್ನು ತಾಯಿಯಾಗಿ, ಪೂಜನೀಯವಾಗಿ ನೋಡುವ ಸಂದರ್ಭದಲ್ಲೂ ಮಹಿಳಾ ಮೀಸಲಾತಿ ಚರ್ಚೆ ನಡೆಯುತ್ತಿರುವುದು ದುರಂತ ಎಂದು ಕುವೆಂಪು ವಿವಿ ಕನ್ನಡ ಭಾರತಿ ನಿರ್ದೇಶಕ ಡಾ.ಜಿ.ಪ್ರಶಾಂತ ನಾಯಕ ಬೇಸರ ವ್ಯಕ್ತಪಡಿಸಿದರು.
ನಗರದ ಕಮಲಾ ನೆಹರೂ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಘ ಹಾಗೂ ಕ್ರೀಡಾ ವಿಭಾಗಗಳ ಸಮಾರೋಪ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣಿಲ್ಲದ ಜಗತ್ತನ್ನು ಊಹಿಸಲೂ ಅಸಾಧ್ಯ. ವ್ಯಕ್ತಿಯ ಪರಿಪೂರ್ಣತೆಯಾಗುವುದು ಹೆಣ್ಣಿಂದ. ಇಂದು ಪುರಷರಿಗಿಂತ ಮಹಿಳೆಯರು ಹೆಚ್ಚು ಅಕ್ಷರಸ್ಥರಾಗಿ ಹೊರಹೊಮ್ಮುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಆಧುನಿಕರಣದ ಭ್ರಮೆಯಲ್ಲಿ ನಮಗೆ ತಿಳಿಯದೇ ಅವಲಂಬನೆ ಹೆಚ್ಚುತ್ತಿದೆ. ಅತಿಯಾದ ಅವಲಂಬನೆಯಿಂದ ನಮ್ಮಲ್ಲಿನ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮ ಹಿರಿಯರು ಸಾಹಿತ್ಯದ ಮೂಲಕ ಅರಿವೇ ಗುರುವೆಂದು ಸಾರಿದರು. ಸಾಹಿತ್ಯ ಒಳ್ಳೆಯ ಬದುಕು ನಡೆಸುವ ಪ್ರಜ್ಞೆ ಕಲಿಸಿಕೊಡಲಿದೆ. ಶತ್ರುಗಳನ್ನು ನಿರಾಳವಾಗಿ ಕ್ಷಮಿಸುವ ಮನೋಸ್ಥೈರ್ಯ ತುಂಬುತ್ತದೆ. ಓದು ಉದ್ಯೋಗ ಪಡೆಯುವ ಸಾಧನವಾಗಿ ಉಳಿದುಬಿಡಬಾರದು. ಬದುಕಿನ ಪ್ರಜ್ಞೆಯೇ ಇಲ್ಲದ ಓದು ಅನುಪಯುಕ್ತ ಎಂದು ಅಭಿಪ್ರಾಯಪಟ್ಟರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ತುಂಬಿದ ಕುಟುಂಬದ ಪರಿಕಲ್ಪನೆ ಕಡಿಮೆಯಾಗುತ್ತಿದೆ. ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯಗಳು ಕ್ಷೀಣಿಸುತ್ತಿದೆ. ಶಿಕ್ಷಣ ಹಣದ ಆಧಾರಿತವಾಗಿ ನಡೆಯುತ್ತಿದೆ. ಬುದ್ದಿವಂತರಿಗಿಂತ ಸಹೃದಯರನ್ನು ತಯಾರಿಸುವ ಶಿಕ್ಷಣ ಅಗತ್ಯವಿದೆ ಎಂದರು.
ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಮಲ್ಲಯ್ಯ, ಡಾ.ಎನ್.ಡಿ.ರಮೇಶ್, ದೈಹಿಕ ಶಿಕ್ಷಣ ನಿರ್ದೇಶಕಿ ಬಿ.ಕೆ.ವಿದ್ಯಾಶ್ರೀ, ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷೆ ಪಲ್ಲವಿ ಶೇಟ್, ಕಾರ್ಯದರ್ಶಿ ಎ.ಸಂಗೀತಾ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.