ಶರಾವತಿ ಸಂತ್ರಸ್ತರಿಗೆ ಬಿವೈಆರ್ ಅಭಯ

sharavati
Published on

ಶಿವಮೊಗ್ಗ: ಅಧಿಕಾರಿಗಳು ಮಾಡಿದ ತಪ್ಪಿನಿಂದ ಶರಾವತಿ ಸಂತ್ರಸ್ತರ ಭೂಮಿ ಹಕ್ಕು ಕನಸು ನನಸಾಗಿಲ್ಲ. ಬದಲಿಗೆ ಒಂದಿಷ್ಟು ಕಗ್ಗಂಟಾಗಿದೆ. ಆದರೆ ಸಂತ್ರಸ್ತರ ಹಿತ ಕಾಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧವಿದೆ. ಸಂತ್ರಸ್ತರು ಆತಂಕಪಡುವ ಅಗತ್ಯವಿಲ್ಲ. ದೆಹಲಿಗೆ ತೆರಳಿ ಕೇಂದ್ರ ಕೃಷಿ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಯ ನೀಡಿದ್ದಾರೆ.

ಮಂಗಳವಾರ ಜಿಪಂ ಆವರಣದಲ್ಲಿ ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂತ್ರಸ್ತ ರೈತರ ನಿಯೋಗಕ್ಕೆ ಧೈರ್ಯ ತುಂಬಿದ ಬಿವೈಆರ್, ಸಂತ್ರಸ್ತರ ಜಮೀನು ಡಿನೋಟಿಫಿಕೇಷನ್ ವಿಷಯದಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಇದ್ದುದೇ ಸಮಸ್ಯೆಯ ಮೂಲವಾಗಿದೆ. ಇದು ಅಧಿಕಾರಿಗಳ ಲೋಪ. ಇದನ್ನು ಸರ್ಕಾರದ ಮಟ್ಟದಲ್ಲೇ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಮೀನಿನ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಗಿರೀಶ್ ಆಚಾರ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆ ಉಲ್ಭಣವಾಗಿದೆ. ನಾಡಿಗೆ ಬೆಳಕು ನೀಡಿರುವ ಜನರು ಇಂದು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ದಶಕಗಳ ಈ ಸಮಸ್ಯೆಗೆ ಅಂದು ಅಧಿಕಾರದಲ್ಲಿದ್ದ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಅಂದು ಉದಾಸೀನತೆ ತೋರಿದ್ದರಿಂದ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net