

ಶಿವಮೊಗ್ಗ: ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ತಿಂಗಳು ನಾಗರಿಕ ವಿಮಾನಯಾನ ಸಚಿವಾಲಯದಿಂದ ಮಲ್ಟಿ ಡಿಸಿಪ್ಲಿನರಿ ತಂಡ ಇಲ್ಲಿಗೆ ಭೇಟಿ ಅಂತಿಮ ಹಂತದ ಪರಿಶೀಲನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಾಮಗಾರಿ ಸ್ಥಳದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.
ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಆನ್‌ಲೈನ್ ಮೂಲಕ ಚರ್ಚಿಸಿ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆ ಸಮಾಲೋಚಿಸಲಾಯಿತು. ಟರ್ಮಿನಲ್ ರನ್‌ವೇ, ಮೂಲ ಸೌಕರ್ಯ, ವಿದ್ಯುತ್ ಸಂಪರ್ಕ ಮುಂತಾದವುಗಳ ಪರಿಶೀಲನೆ ನಡೆಸಲಾಯಿತು.
ವಿಮಾನಯಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಉಷಾ ಪದಿ, ಐಡಿಡಿ ಅಧಿಕಾರಿ ಗೌರವ್ ಗುಪ್ತ, ಡಿಜಿಸಿಎ ರಾಜೇಶ್, ಸ್ಟಾರ್ ಏರ್ ಸಂಸ್ಥೆಯ ವಿಕ್ರಂ, ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಮೂಲ ಸೌಕರ್ಯ ಇಲಾಖೆ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ರೈಟ್ಸ್ ಸಂಸ್ಥೆಯ ಎಜಿಎಂ ರಾಜು, ಮುಖ್ಯ ಇಂಜಿನಿಯರ್ ಕಾಂತರಾಜ್, ಎಇ ಸಂಪತ್, ಎಇಇ ಕಿರಣ್ ಮುಂತಾದವರಿದ್ದರು.
ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನ ಸಂಚಾರ ನಿಯಂತ್ರಣ ಘಟಕದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮೂಲ ಸೌಲಭ್ಯ ಕಲ್ಪಿಸುವ ಅಂತಿಮ ಹಂತದ ಕಾಮಗಾರಿಗಳೂ ಪ್ರಗತಿಯಲ್ಲಿವೆ. ನವೆಂಬರ್ ಅಂತ್ಯಕ್ಕೆ ಯೋಜನೆ ಪೂರ್ಣಗೊಂಡು ವಿಮಾನ ನಿಲ್ದಾಣ ಲೋಕಾರ್ಪಣೆ ಸಿದ್ಧವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ-ಬೆಂಗಳೂರು ಮಾತ್ರವಲ್ಲದೇ ನೆರೆ ರಾಜ್ಯಗಳ ಹಲವು ಪ್ರಮುಖ ನಗರಗಳ ಸಂಪರ್ಕ ಹಾಗೂ ಸಂಚಾರಕ್ಕೆ ಕ್ರಮ ವಹಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯದ ಉನ್ನತ ಅಧಿಕಾರಿಗಳ ತಂಡ ಸದ್ಯದಲ್ಲಿ ನೆರೆಯ ರಾಜ್ಯ ಮಹಾರಾಷ್ಟ್ರದ ಶಿರಡಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ ಎಂದರು.