

ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗೆಹರಿಸದ ಬಿಜೆಪಿಗರೇ ಸರ್ಕಾರ ಬಿಟ್ಟು ತೊಲಗಿ ಎಂಬ ಘೋಷಣೆಗಳೊಂದಿಗೆ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯಾಗುತ್ತಿದೆ. ಜನ ವಿರೋಧಿ ನೀತಿಗಳು ಬದುಕಿಗೆ ಮಾರಕವಾಗುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಬರೆ ಬೀಳುತ್ತಿದೆ. ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುವಾದದ ನಶೆಯ ಬೀಜ ಬಿತ್ತುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಅಡಗೆ ಅನಿಲದ ಬೆಲೆ ಈಗಾಗಲೇ ಸಾವಿರ ರೂ. ಗಡಿ ದಾಟಿದೆ. ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು 164ನೇ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಕೇಂದ್ರ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಶ್ರೀಸಾಮಾನ್ಯ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೇ ಹೇಳಿದಂತಾಗಿದೆ. ಹಲವು ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರೂ ಆರ್ಥಿಕ ವ್ಯವಸ್ಥೆಯನ್ನು ಹತೋಟಿಗೆ ತರವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಶೇ. 40 ಕಮಿಷನ್ ಲೂಟಿ ಹೊಡೆದು ಸರ್ಕಾರಿಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಾ ಜನವಿರೋಧಿ ಆಡಳಿತ ನಡೆಸುತ್ತಿದೆ. ದೇಶದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಸುಳ್ಳು ಹೇಳಿ ಯುವಜನರ ದಿಕ್ಕು ತಪ್ಪಿಸಿತು. ಯುವಕರಿಗೆ ಉದ್ಯೋಗ ಕೊಡುವ ಬದಲು ಕೋಮುವಾದವೆಂಬ ನಶೆಯನ್ನು ತುಂಬುತ್ತಿದೆ. ಹಾಗಾಗಿ ಕೂಡಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನ ವಿರೋಧಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ಮಹಿಳಾ ಮುಖಂಡರಾದ ಜಿ.ಪಲ್ಲವಿ, ಕವಿತಾ, ಸ್ಟೆಲ್ಲಾ ಮಾರ್ಟಿನ್, ಪದಾಧಿಕಾರಿಗಳಾದ ಎಂ.ರಾಹುಲ್, ಇರ್ಫಾನ್, ಪುಷ್ಪಕ್‌ಕುಮಾರ್, ಎಂ.ರಾಕೇಶ್, ರಾಜೀವ್ ರಾಯ್ಕರ್, ಕೆ.ಎಲ್.ಪವನ್, ಜಮೀಲ್, ಮೋಹನ್ ಸೋಮಿನಕೊಪ್ಪ, ನದೀಂ ಮದರಿಪಾಳ್ಯ, ಮಸ್ತಾನ್, ಮಹಮದ್ ಫೈರೋಜ್ ಶಾರು, ಚೇತನ್ ಇತರರಿದ್ದರು.