ಶಿವಮೊಗ್ಗದಲ್ಲಿ ಅಪರೂಪದ ಬಿಳಿ ನಾಗರಹಾವು ಸೆರೆ !

Untitled1
Published on

ಶಿವಮೊಗ್ಗ: ವಿಶ್ವ ಹಾವುಗಳ ದಿನವನ್ನಾಗಿ ಶನಿವಾರ ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತಿದ್ದು ಮಲೆನಾಡಿನಲ್ಲಿ ಹತ್ತುಹಲವು ಬಗೆ ಹಾವುಗಳು ಪತ್ತೆಯಾಗುತ್ತಲೇ ಇವೆ. ಆದರೆ ಶನಿವಾರ ತೀರ್ಥಹಳ್ಳಿ ರಸ್ತೆಯ ಎನ್.ಎಚ್.ಆಸ್ಪತ್ರೆ ಹಿಂಬದಿ ವೈದ್ಯರ ಮನೆಯಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆಯಾಗಿದ್ದು ಉರುಗತಜ್ಞ ಸ್ನೇಕ್ ಕಿರಣ್ ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಎನ್.ಎಚ್.ಆಸ್ಪತ್ರೆ ವೈದ್ಯ ಡಾ. ಪ್ರೀತಂ ಅವರ ಮನೆಯಲ್ಲಿ ಮೂರು ಉದ್ದದ ಬಿಳಿ ನಾಗರಹಾವು(ಆಲ್ಬಿನೊ ಕೋರ್ಬಾ) ಕಾಣಿಸಿಕೊಂಡಿತ್ತು. ಅಪರೂಪದ ಹಾವು ಕಂಡು ಆತಂಕಕ್ಕೆ ಒಳಗಾದ ವೈದ್ಯರ ಕುಟುಂಬ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿತ್ತು. ಸ್ಥಳಕ್ಕೆ ತೆರಳಿದ ಕಿರಣ್ ಸೌದೆಯಲ್ಲಿ ಅಡಗಿದ್ದ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟು ಬಂದಿದ್ದಾರೆ.

ಈ ಕುರಿತು ಮಾತನಾಡಿದ ಸ್ನೇಕ್ ಕಿರಣ್, ಶನಿವಾರ (ಜು.16) ವಿಶ್ವ ಹಾವಿನ ದಿನವಾಗಿದ್ದು ಇದುವರೆಗೂ 20 ಸಾವಿರದಷ್ಟು ವಿವಿಧ ಬಗೆಯ ಹಾವುಗಳನ್ನು ಸೆರೆ ಹಿಡಿದಿದ್ದೇನೆ. ಆದರೆ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ಬಿಳಿ ನಾಗರಹಾವನ್ನು ಸೆರೆ ಹಿಡಿಯಲಾಗಿದೆ. ಸಾಮಾನ್ಯವಾಗಿ ಬಿಳಿ ಹುಲಿ, ಬಿಳಿ ನವೀಲು, ಬಿಳಿ ಪಾರಿವಾಳ ಮಾದರಿಯಲ್ಲಿ ದೇವರ ಸೃಷ್ಟಿಯಾಗಿ ಬಿಳಿ ನಾಗರಹಾವು ಇದಾಗಿದೆ ಎಂದರು.

ಚರ್ಮ ತೊಂದರೆಯಿಂದ ಬಿಳಿ ರೂಪ ಪಡೆದಿದ್ದು ದೇವರ ಅನುಗ್ರಹ ಪಡೆದುಕೊಂಡಿದೆ. ಯಾವುದೇ ಕಾರಣಕ್ಕೂ ಜನರು ಹಾವುಗಳನ್ನು ಸಾಯಿಸಬಾರದು. ಅವು ಸುಖಾಸುಮ್ಮನೆ ಯಾರಿಗೂ ತೊಂದರೆ ಮಾಡುವುದಿಲ್ಲ. ಅಕಸ್ಮಾತ್ ತುಳಿದರೆ ಅಥವಾ ಹಲ್ಲೆ ಮಾಡಿದರೆ ಮಾತ್ರ ತಿರುಗಿಬಿದ್ದು ಕಚ್ಚುತ್ತವೆ. ಹಾವುಗಳ ಬಗ್ಗೆ ತಪ್ಪು ಕಲ್ಪನೆ ಬೇಡ. ಹಾವುಗಳು ಕಂಡುಬಂದರೆ ಉರುಗ ತಜ್ಞರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net