

ಶಿವಮೊಗ್ಗ: ನಗರದಲ್ಲಿ ತುಂಗಾ ನದಿಯಿಂದ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಇಮಾಮ್ ಬಾಡಾ, ಶಾಂತಮ್ಮ ಲೇಔಟ್, ಕುಂಬಾರಗುಂಡಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿತರು. ಈ ವೇಳೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವರಿಗೆ ಸಂತ್ರಸ್ತರು ಅನೇಕ ದೂರುಗಳು ಹೇಳಿಕೊಂಡರು. ಶಾಂತಮ್ಮ ಲೇಔಟ್‌ನಲ್ಲಿ ಪರಿಶೀಲನೆ ವೇಳೆ ಎದುರಾದ ಲಕ್ಷ್ಮೀ ಮತ್ತು ಜ್ಯೋತಿ ಮತ್ತಿತರರು, ಹಲವು ವರ್ಷಗಳಿಂದ ಲೇಔಟ್‌ನಲ್ಲಿ ವಾಸವಾಗಿದ್ದೇವೆ. ಇದುವರೆಗೆ ಇಲ್ಲದ ಸಮಸ್ಯೆ ಕಳೆದ ವರ್ಷದಿಂದ ಶುರುವಾಗಿದೆ. ತುಂಗಾ ನದಿ ನೀರು ಲೇಔಟ್‌ಗೆ ನುಗ್ಗಿ ಬೆಲೆ ಬಾಳುವ ವಸ್ತುಗಳು ಹಾನಿಗೀಡಾಗಿವೆ. ಲಕ್ಷಾಂತರ ರೂ. ವೆಚ್ಚ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ನೆರೆ ಸಂದರ್ಭದಲ್ಲಿ ಕುಸಿಯುವ ಭೀತಿ ಕಾಡುತ್ತಿದೆ. ತಕ್ಷಣವೇ ಪಾಲಿಕೆಯಿಂದ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯ ಎಸ್.ಜ್ಞಾನೇಶ್ವರ್, ಡಿಸಿ ಕೆ.ಬಿ.ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್ ಇದ್ದರು.
27ರಂದು ಅಧಿಕಾರಿಗಳ ಸಭೆ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ಕಳೆದ ಬಾರಿ ಅತಿವೃಷ್ಟಿಯಿಂದ ನಗರದ 15 ಭಾಗಗಳಲ್ಲಿ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಆದರೆ ಈ ಬಾರಿ ಮುಂಗಾರು ಆಗಮನಕ್ಕಿಂತ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಂಡು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. 4 ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಹಾನಿ ಬಗ್ಗೆ ಪರಿಶೀಲಿಸಲಾಗುತ್ತಿದೆ. ತಾತ್ಕಾಲಿಕವಾಗಿ ನೆರೆ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾನಿಗೆ ಪರಿಹಾರ ನೀಡುವುದು ಸೇರಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.