ಸ್ವದೇಶಿ ವಸ್ತುಗಳ ಬಳಕೆಯಿಂದ ಸ್ಥಳೀಯ ಆರ್ಥಿಕತೆ ಅಭಿವೃದ್ಧಿ: ಜಿ.ಅನುರಾಧಾ ಅಭಿಮತ

13 smg 1
Published on

ಶಿವಮೊಗ್ಗ: ದೇಶದ ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಬಳಸಲು ಮುಂದಾಗಬೇಕು. ಇದರಿಂದ ಸ್ಥಳೀಯ ಆರ್ಥಿಕ ಅಭಿವೃದ್ಧಿ ಹೊಂದುವ ಮೂಲಕ ದೇಶದ ಅಭಿವೃದ್ಧಿಯು ಸಾಧ್ಯವಾಗುತ್ತದೆ ಎಂದು ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧಾ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಶಿವಮೊಗ್ಗ ಸಮನ್ವಯ ಟ್ರಸ್ಟ್‌ನಿಂದ ಆಯೋಜಿಸಿದ್ದ ಸ್ವದೇಶಿ ಮಂತ್ರ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ್ದರು. ಗ್ರಾಮಗಳ ಅಭಿವೃದ್ಧಿ ಮತ್ತು ಸಬಲೀಕರಣ ಆಶಯದಿಂದ ಸ್ವದೇಶಿ ಉತ್ಪನ್ನಗಳ ಬಳಕೆ ಮಾಡುವಂತೆ ಪ್ರೋತ್ಸಾಹಿಸಿದ್ದರು. ಸ್ಥಳೀಯ ಮಟ್ಟದಲ್ಲಿಯು ಉದ್ಯೋಗ ಸೃಷ್ಟಿ, ಆರ್ಥಿಕ ಶಕ್ತಿ ವೃದ್ಧಿಸುವ ಜತೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಮೂರು ದಿನಗಳ ಸಂಭ್ರಮ ಆಚರಣೆ ಮಾಡಲಾಗುತ್ತಿದೆ. ದೇಶದ ಎಲ್ಲ ಕಡೆಗಳಲ್ಲೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸಬೇಕಿದೆ. ಯುವಜನರು ದೇಶಪ್ರೇಮ ಜಾಗೃತಗೊಳಿಸುವ ಜತೆಯಲ್ಲಿ ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಧನಂಜಯ್, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿದರು. ಸ್ಟೈಲ್ ಡ್ಯಾನ್ಸ್ ಗ್ರೂಪ್ ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿತು. ಸಹ್ಯಾದ್ರಿ ಕಲಾ ಕಾಲೇಜಿನ ಕೃಪಾಲಿನಿ, ಸಮನ್ವಯ ಟ್ರಸ್ಟ್‌ನ ಟ್ರಸ್ಟಿ ನಿತ್ಯ, ಅಭಿ ಎಚ್.ಎನ್.ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net