

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಹೆಸರಲ್ಲಿ ನಗರದ ತುಂಬಾ ಗುಂಡಿ ಮಾಡಿ ಮುಚ್ಚದೇ ಇರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದಾದ್ಯಂತ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಸಾರ್ವಜನಿಕರಿಗೆ ಓಡಾಡಲು ಕಿರಿಕಿರಿ ಆಗುತ್ತಿದೆ. ಗುಂಡಿಗಳಲ್ಲಿ ನೀರು ನಿಂತು ಸವಾರರು ವಾಹನಗಳಲ್ಲಿ ತೆರೆಳುವಾಗ ಅನಾಹುತ ಸಂಭವಿಸುತ್ತಿವೆ. ಇಷ್ಟಾದರೂ ಕಾಮಗಾರಿಗಳ ನೆಪದಲ್ಲಿ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚುತ್ತಿಲ್ಲ. ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ಸ್ಮಾರ್ಟ್‌ಸಿಟಿ ಎಂಡಿ ಚಿದಾನಂದ ವಟಾರೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ನಿರಾಳವಾಗಿ ರಸ್ತೆಯಲ್ಲಿ ಓಡಾಡುವ ವಾತಾವರಣ ಸೃಷ್ಟಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವೇದಿಕೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಕೋಟ್ಯಾನ್, ನಿಂಬೆಹಣ್ಣು ಮಂಜುನಾಥ, ಶಬ್ಬೀರ್, ಎನ್.ರಂಗನಾಥ, ಸಿ.ಟಿ.ಸತ್ಯನಾರಾಯಣ, ಡಿ.ಲಿಂಗರಾಜು, ಫಾರೂಕ್, ಕೃಷ್ಣ, ಎಚ್.ಚಂದ್ರಶೇಖರ್, ಎಸ್.ವಿಜಯಕುಮಾರ್, ಎಚ್.ಎನ್.ಮಂಜುನಾಥ, ಎಸ್.ಗಂಗಾಧರ್ ಇತರರಿದ್ದರು.