

ಶಿವಮೊಗ್ಗ: ಮಹಾವೀರ ವೃತ್ತದ ಖತುಬ್-ಎ ಶಿವಮೊಗ್ಗ ಹಜರತ್ ಸೈಯದ್ ಶಾ ಆಲಿಂ ದಿವಾನ್ ಷಾ ಖಾದ್ರಿ ಶಾಪಿಂಗ್ ಕಾಂಪ್ಲೆಕ್ಸ್‌ನ ಆಡಳಿತ ಮಂಡಳಿ ಚುನಾವಣೆ ವಿಳಂಬ ಮತ್ತು ಮಹಾಸಭಾ ಸದಸ್ಯರಿಗೆ ಗುರುತಿನ ಚೀಟಿ ವಿಲೇವಾರಿಯಲ್ಲಿ ಯಥಾ ಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ದರ್ಗಾ ಉರುಸ್ ಕಮಿಟಿ ಸದಸ್ಯರು ಗುರುವಾರ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಖಾದ್ರಿ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಮೂರು ವರ್ಷದ ಅವಧಿಗೆ 2016-17ನೇ ಸಾಲಿನಲ್ಲಿ ಪ್ರಥಮ ಬಾರಿ ಚುನಾವಣೆ ನಡೆದಿತ್ತು. ಅದಾದ ಬಳಿಕ ಈವರೆಗೂ ಚುನಾವಣೆ ನಡೆದಿಲ್ಲ. ಸರ್ಕಾರ ಎರಡು ಬಾರಿ ಆಡಳಿತಾಧಿಕಾರಿ ನೇಮಿಸಿದೆ. ಜತೆಗೆ ಈಗಿನ ಆಡಳಿತ ಅಧಿಕಾರಿಯನ್ನೇ ಚುನಾವಣಾಧಿಕಾರಿಯನ್ನಾಗಿ ಮುಂದುವರಿಸಿದ್ದು ಸರಿಯಲ್ಲ ಎಂದು ದೂರಿದರು.
ಶಾಪಿಂಗ್ ಕಾಂಪ್ಲೆಕ್ಸ್ ಮಹಾಸಭಾ ಸದಸ್ಯರ ಗುರುತಿನ ಚೀಟಿ ವಿತರಣೆ ಕ್ರಮದ ಬಗ್ಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ನಿಯಮ ರಚಿಸಿದ್ದು ಮನೆ ಅಥವಾ ಮಸೀದಿಗಳಲ್ಲಿ ಕಾರ್ಡ್ ವಿತರಣೆಗೆ ಸಮಿತಿ ಮುಂದಾಗಿದೆ. ಆದರೆ ಹಿಂದಿನ ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳು ಕಾರ್ಡ್ ವಿತರಣೆಗೆ ನಿಯಮ ರಚಿಸಿದ್ದ ಕಾರಣ ಸದಸ್ಯರು ಅವರೇ ಬಂದು ತಮ್ಮ ಗುರುತಿನ ಚೀಟಿ ಪಡೆಯುವಂತೆ ಮಾಡಿದ್ದು ಮುಂದೆಯೂ ಅದೇ ರೀತಿ ನಡೆಯಬೇಕಿದೆ ಎಂದು ಮನವಿ ಮಾಡಿದ್ದಾರೆ.
ಈ ನಡುವೆ ಬೋಗಸ್ ಕಾರ್ಡ್‌ಗಳನ್ನು ತಡೆಯಬೇಕಿದೆ. ಜಿಲ್ಲಾ ವಕ್ಫ್ ಬೋರ್ಡ್‌ಗೆ ಶಾಪಿಂಗ್ ಕಾಂಪ್ಲೆಕ್ಸ್ ಚುನಾವಣೆ ನಡೆಸಲು ಹಾಗೂ ಜಿಲ್ಲೆಯಲ್ಲಿ ಮಸೀದಿಗಳ ಸಲಹಾ ಸಮಿತಿ ರಚನೆ ಮಾಡುವ ಅಧಿಕಾರವಿದೆಯೇ ವಿನಾ ಶಾಪಿಂಗ್ ಕಾಂಪ್ಲೆಕ್ಸ್ ನಿಯಮ ಉಲ್ಲಂಘಿಸುವ ಅಧಿಕಾರವಿಲ್ಲ. ಹಾಗಾಗಿ ಆಡಳಿತಾಧಿಕಾರಿಗಳು ಸರ್ಕಾರದ ನಿಯಮದಂತೆ ಈ ಹಿಂದಿದ್ದ ಅಧಿಕಾರಿಗಳು ರೂಪಿಸಿದ ಕಾನೂನು ಕ್ರಮ ಅನುಸರಿಸುವಂತೆ ಉರುಸ್ ಕಮಿಟಿ ಮತ್ತು ಮಹಾಸಭಾ ಸದಸ್ಯರು ಸರ್ಕಾರಕ್ಕೆ ಒತ್ತಾಯಿಸಿದರು.