

ಶಿವಮೊಗ್ಗ: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಶಿವಮೊಗ್ಗ ರಂಗಹಬ್ಬ 20ನೇ ನಾಟಕೋತ್ಸವವನ್ನು ಮಾ.26ರಿಂದ 28ವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ತಿಳಿಸಿದರು.
ಕಳೆದೆರಡು ದಶಕದಿಂದ ಶಿವಮೊಗ್ಗದಲ್ಲಿ ನಿರಂತರವಾಗಿ ರಂಗ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದು ಇದುವರೆಗೆ ಶಿವಮೊಗ್ಗದ ಎಲ್ಲ ರಂಗತಂಡಗಳು ಹಾಗೂ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ 19 ನಾಟಕೋತ್ಸವಗಳನ್ನು ಶಿವಮೊಗ್ಗ ಬೆಂಗಳೂರು, ಸೊರಬ ಸೇರಿ ಹಲವೆಡೆ ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20ನೇ ನಾಟಕೋತ್ಸವದ ಮೊದಲ ದಿನ ಮಾ.26ರ ಸಂಜೆ 6.45ಕ್ಕೆ ಸಹ್ಯಾದ್ರಿ ಕಲಾ ತಂಡವು ಡಾ. ಜಿ.ಆರ್.ಲವ ಅವರ ನಿರ್ದೇಶನದಲ್ಲಿ ನಾ.ಶ್ರೀನಿವಾಸ್ ವಿರಚಿತ ಗಾಂಧಿಯ ಕನ್ನಡಕ ನಾಟಕ ಪ್ರದರ್ಶನಗೊಳ್ಳಲಿದೆ. 27ರ ಸಂಜೆ 6.45ಕ್ಕೆ ಅಜಯ್ ನೀನಾಸಂ ನಿರ್ದೇಶನದಲ್ಲಿ ರಂಗಬೆಳಕು ತಂಡವು ಶಿವಕುಮಾರ್ ಮಾವಲಿ ಅವರ ಪ್ರೇಮಪತ್ರದ ಆಫೀಸು ಮತ್ತು ಇತರ ಕತೆಗಳು ಹಾಗೂ ಶೇಕ್ಸ್‌ಪಿಯರ್ ಕೃತಿ ಆಧರಿಸಿದ ಒಲವಿನ ಜಂಕ್ಷನ್ ನಾಟಕವನ್ನು ಅಭಿನಯಿಸಲಿದೆ. 28ರ ಸಂಜೆ 6.45ಕ್ಕೆ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಹೊಂಗಿರಣ ರಂಗತಂಡವು ಮಹಿಳಾ ಭಾರತ ನಾಟಕ ಪ್ರದರ್ಶಿಸಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, 26ರಂದು ವಿಶ್ವ ರಂಗಭೂಮಿ ದಿನವನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಉದ್ಘಾಟಿಸುವರು. 27ರಂದು ಜಿ.ಆರ್.ಲವ ಹಾಗೂ ಅಜಯ್ ನಿನಾಸಂ ಅವರನ್ನು ಸನ್ಮಾನಿಸಲಾಗುವುದು ಎಂದರು. ಪ್ರಮುಖರಾದ ಸಾಸ್ವೆಹಳ್ಳಿ ಸತೀಶ್, ಜಿ.ಆರ್.ಲವ, ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ಕಲಾವಿದರು ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಅಧ್ಯಕ್ಷರಾಗಿ ಕಾಂತೇಶ್ ಕದರಮಂಡಲಗಿ, ಉಪಾಧ್ಯಕ್ಷರಾಗಿ ಡಿ.ಎಂ.ರಾಜಕುಮಾರ್, ಆರ್.ಎಸ್.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿಗಳಾಗಿ ಎಸ್.ಎಚ್.ಸುರೇಶ್, ಟಿ.ಮನು, ಖಜಾಂಚಿಯಾಗಿ ಗಣೇಶ್ ಕೆಂಚನಾಲ ಆಯ್ಕೆಯಾಗಿದ್ದಾರೆ.