

ಶಿವಮೊಗ್ಗ: ಕೇವಲ ಮೂರೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಪರಿಣಾಮ 3,291 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ಮಳೆಗೆ ಬರೋಬ್ಬರಿ 212.13 ಕೋಟಿ ರೂ. ನಷ್ಟ ಸಂಭವಿಸಿದೆ.
ಜೂ.1ರಿಂದ ಆ.28ರವರೆಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಆ.1ರಿಂದ 28ರ ಅವಧಿಯಲ್ಲಿ 526 ಮಿ.ಮೀ. ವಾಡಿಕೆ ಮಳೆ ಬದಲು 540 ಮಿ.ಮೀ. ಸುರಿದಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ಮಳೆಗೆ 21.24 ಕೋಟಿ ರೂ. ಬೆಳೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿ 1,513 ಮನೆಗಳಿಗೆ ಹಾನಿಯಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಮಳೆಯಿಂದ ಜಿಲ್ಲೆಯಲ್ಲಿ 212.13 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 30.88 ಕೋಟಿ ರೂ. ಸರ್ಕಾರ ಪರಿಹಾರ ರೂಪದಲ್ಲಿ ಬಿಡುಗಡೆ ಮಾಡಿದ್ದರೆ, ಜಿಲ್ಲಾಧಿಕಾರಿ ಖಾತೆಯಿಂದ ನಷ್ಟ ಪರಿಹಾರವಾಗಿ 11 ಕೋಟಿ ರೂ. ಬಿಡುಗಡೆಯಾಗಿದೆ.
1,012 ಮನೆಗಳು ಪೂರ್ಣ ಹಾನಿ:
ಜೂ.1ರಿಂದ ಆ.28ರವರೆಗೆ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದ್ದು 1,012 ಮನೆಗಳು ಪೂರ್ಣ ಪ್ರಮಾಣದ ಹಾನಿಗೀಡಾಗಾಗಿವೆ. 388 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 12 ಜಾನುವಾರು ಮೃತಪಟ್ಟಿದ್ದು, ಅವುಗಳಲ್ಲಿ 3 ಕರುಗಳು ಸೇರಿವೆ. ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ 12 ಕೊಟ್ಟಿಗೆ ಸೇರಿ 496 ಮನೆಗಳು ಹಾನಿಗೊಳಗಾಗಿವೆ. ಶಿವಮೊಗ್ಗ 211, ಭದ್ರಾವತಿ 101, ತೀರ್ಥಹಳ್ಳಿ 1, ಸಾಗರ 32, ಹೊಸನಗರ 4, ಶಿಕಾರಿಪುರ 133 ಸೊರಬ 8 ಮನೆಗಳು ಹಾನಿಗೊಳಗಾಗಿವೆ.
ತಹಸೀಲ್ದಾರ್‌ಗಳ ಖಾತೆಗೆ 30 ಲಕ್ಷ ರೂ.:
ಮಾನವ ಹಾನಿ ಹಾಗೂ ಜಾನುವಾರು ಹಾನಿ ಸೇರಿ ರಕ್ಷಣಾ ಕಾರ್ಯಗಳಿಗೆ ಪ್ರತಿ ತಹಸೀಲ್ದಾರ್‌ಗಳಿಗೆ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮನೆ ಹಾನಿಯಾಗಿದ್ದರೆ ತಕ್ಷಣ 10 ಸಾವಿರ ರೂ. ನೀಡಲು ಸೂಚಿಸಲಾಗಿದೆ. ಮನೆ ಹಾನಿ ಕುರಿತು ತಹಸೀಲ್ದಾರ್ ಆರ್‌ಜಿಆರ್‌ಎಸ್(ರಾಜೀವ್‌ಗಾಂಧಿ ವಸತಿ ಅಭಿವೃದ್ಧಿ ನಿಗಮ) ಪೋರ್ಟಲ್ನಲ್ಲಿ ನಮೂದಿಸುತ್ತಾರೆ. ಪರಿಹಾರ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಹೋಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು.