

ಶಿವಮೊಗ್ಗ: ಜಗತ್ತಿನ ಎಲ್ಲ ಧರ್ಮಗಳು ಪ್ರೀತಿ, ಶಾಂತಿ, ಸೌಹಾರ್ದತೆ ಸಾರುತ್ತವೆ. ಶಾಂತಿ ನೆಲೆಸಿರುವ ಕಡೆ ದ್ವೇಷ ಇರುವುದಿಲ್ಲ. ದ್ವೇಷವಿರುವ ಕಡೆ ಶಾಂತಿ ನೆಲೆಸುವುದಿಲ್ಲ. ಹಾಗಾಗಿ ದ್ವೇಷ, ಕಿಚ್ಚು, ಅಸೂಯೆ ನಿರ್ಮೂಲನೆಗೆ ಶಾಂತಿಮಂತ್ರವೊಂದೇ ಮದ್ದಾಗಬೇಕಿದೆ ಎಂದು ಚಿತ್ರದುರ್ಗ ಸಿರಿಗೆರೆಯ ತರಳುಬಾಳು ಜಗದ್ಗುರು ಡಾ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಿ.ಎಚ್.ರಸ್ತೆಯಲ್ಲಿ ನಮ್ಮೆಲರ ನಡಿಗೆ ಶಾಂತಿ ಕಡೆಗೆ ಕಾಲ್ನಡಿಗೆ ಜಾಥಾದ ಬಳಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಎಂಬುದು ಭಾವನೆಗಳ ತವರೂರು. ಇಬ್ಬರು ರಾಷ್ಟ್ರಕವಿಗಳು, ಅಲ್ಲಮಪ್ರಭು ಹಾಗೂ ಸಮಾಜವಾದಿ ಚಿಂತಕರು ಜನಿಸಿದ ಮಣ್ಣಿದು. ಶಿವಮೊಗ್ಗ ವಿಶಿಷ್ಟ ಗುಣ ಹೊಂದಿದ್ದು ಇಲ್ಲಿ ಶಾಂತಿ ಬದಲು ಪದೇಪದೆ ಅಶಾಂತಿ ಮೂಡುತ್ತಿರುವುದು ಒಳ್ಳೆಯ ಬೆಳೆವಣಿಗೆಯಲ್ಲ ಎಂದರು.
ನಮ್ಮ ಸುತ್ತಮುತ್ತ ಇರುವ ಕೊಳಕು ದೃಷ್ಟಿ ಹೋಗಬೇಕು. ಸಮಾಜದಲ್ಲಿ ಒಳ್ಳೆಯ ದೃಷ್ಟಿ ನೆಲಸಬೇಕು. ಯಾರ ವಿರುದ್ಧವೂ ದ್ವೇಷ ಸಾರುವ ಅವಶ್ಯಕತೆ ನಮಗಿಲ್ಲ. ವೇದದ ಕಾಲದಿಂದಲೂ ಶಾಂತಿ ಕುರಿತು ಉಲ್ಲೇಖವಿದೆ. ನೀವು ದುಡಿದಿದ್ದನ್ನು ನೀವೇ ತಿನ್ನಬೇಕು. ಜತೆಗೆ ಹಂಚಿಕೊಂಡು ತಿನ್ನಬೇಕು ಎಂದು ಹೇಳಿದರು.
ಎಲ್ಲ ಧರ್ಮಗಳಲ್ಲೂ ಅವರವರ ಅನುಯಾಯಿಗಳಿದ್ದಾರೆ. ಧರ್ಮಕ್ಕೆ ಮಸಿ ಬಳಿಯುವವರೂ ಇದ್ದಾರೆ. ಅಂತಹವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮೀಯರ ರಕ್ತ ಹರಿದಿದೆ. ಹಾಗಾಗಿ ಸ್ವಾತಂತ್ರ್ಯವನ್ನು ಸ್ವೇಚ್ಛಾಚರವನ್ನಾಗಿ ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ನಮ್ಮ ನಡಿಗೆ ಶಾಂತಿಯ ಕಡೆಗೆ ಪ್ರೌಢಶಾಲೆಗೆ ಮುಗಿಯಬಾರದು. ನಿರಂತರ, ಕೊನೆ ಇಲ್ಲದ ನಡಿಗೆ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.
ಅಲ್ಲಮ ಪ್ರಭು, ಅಕ್ಕಮಹಾದೇವಿ ಕುವೆಂಪು ಹುಟ್ಟಿದ ನಾಡಿನಲ್ಲಿ ಅಶಾಂತಿ ಒಳ್ಳೆಯದಲ್ಲ. ಎಲ್ಲ ಧರ್ಮದಲ್ಲಿಯೂ ಶಾಂತಿ ಬಯಸುವರಿದ್ದಾರೆ. ಮುಂದೆ ಬರುವ ಎಲ್ಲ ಹಬ್ಬ ಹರಿದಿನಗಳನ್ನು ಎಲ್ಲ ಧರ್ಮಗಳು ಸೇರಿ ಆಚರಿಸುವಂತಾಗಬೇಕು. ಹಬ್ಬ ಹರಿದಿನಗಳು ಬಂದರೆ ಕುಣಿದು ಕುಪ್ಪಳಿಸುವಂತಾಗಬೇಕು. ತಲೆ ಕತ್ತರಿಸುವಂತಾಗಬಾರದು ಎಂದು ಹೇಳಿದರು.