

ಶಿವಮೊಗ್ಗ: ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಭರಣಿ ಮತ್ತು ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ ಶನಿವಾರ ಭಾರೀ ಭಕ್ತರ ಸಮೂಹದ ನಡುವೆ ಸಂಪನ್ನಗೊಂಡಿತು.
ಶನಿವಾರವೂ ಭಕ್ತರು ಭರಣಿ ಕಾವಡಿ(ಹರಕೆ)ಗಳನ್ನು ಹೊತ್ತು ಕಾಲ್ನಡಿಗೆಯಲ್ಲೇ ಗುಡ್ಡೇಕಲ್‌ಗೆ ಬಂದು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದು ಹರಕೆ ತೀರಿಸಿದರು. ಮಕ್ಕಳು, ಮಹಿಳೆಯರು, ಯುವಕರು, ವಯಸ್ಕರು ಹರಕೆ ಕಾವಡಿಗಳನ್ನು ಹೊತ್ತು ದೇವರಿಗೆ ಸಮರ್ಪಿಸಿದರು.
ಶನಿವಾರ ಬೆಳಗ್ಗೆ ಗುಡ್ಡೇಕಲ್ ಭಾಗದಲ್ಲಿ ಜನಜಾತ್ರೆಯೇ ನೆರೆದಿತ್ತು. ಸಾವಿರಾರು ಜನರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಭಕ್ತರು ಕಾಲ್ನಡಿಗೆಯಲ್ಲೇ ಹರಕೆ ಕಾವಡಿ ಹೊತ್ತು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಜಾತ್ರೆ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಬಾಲಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆದವು. ಹಳದಿ ವಸ್ತ್ರಗಳನ್ನು ತೊಟ್ಟ ಭಕ್ತರ ಗುಂಪು ಭುಜದ ಮೇಲೆ ಕಾವಡಿಗಳನ್ನು ಹೊತ್ತು ವಾದ್ಯದ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು.
ನಗರದಲ್ಲಿ ವಿವಿಧ ಕಡೆಗಳಿಂದ ಕಾವಡಿಗಳನ್ನು ಹೊತ್ತು ಬರುವ ಭಕ್ತರನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು. ಕಾರ್, ಖಾಸಗಿ ಬಸ್, ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳನ್ನು ಬದಲಾಯಿಸಲಾಗಿತ್ತು. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ಕಲ್ಪಿಸಿದ್ದರು. ದೇವಸ್ಥಾನದ ಸುತ್ತಮುತ್ತ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬೆಂಡು-ಬತ್ತಾಸು, ಖಾರ, ಮಂಡಕ್ಕಿ, ಮಕ್ಕಳ ಆಟಿಕೆ ವಸ್ತುಗಳು, ಬಳೆ, ಹಣ್ಣು-ಕಾಯಿ ಮತ್ತಿತರ ವಸ್ತುಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಣಿಸಿಕೊಂಡು ಜಾತ್ರೆಗೆ ಮೆರುಗು ನೀಡಿದ್ದವು.