ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

4 smg 6
Published on

ಶಿವಮೊಗ್ಗ: ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಗ್ರಾಪಂ ಹಂತದಲ್ಲಿ ವಸತಿರಹಿತರಿಗೆ ಸೂರು ಒದಗಿಸಬೇಕೆಂದು ಒತ್ತಾಯಿಸಿ ಜಿಪಂ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ನೇತೃತ್ವದಲ್ಲಿ ಹಸೂಡಿ ಜಿಪಂ ಕ್ಷೇತ್ರದ ಜನರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಎರಡು ವರ್ಷಗಳಲ್ಲಿ ಮಳೆಯಿಂದಾಗಿ ಜಿಲ್ಲೆಯಲ್ಲಿ ನೂರಾರು ಮನೆಗಳು ಕುಸಿದಿವೆ. ಸಂಪೂರ್ಣ ಕುಸಿದ ಮನೆಗಳ ಮರು ನಿರ್ಮಾಣಕ್ಕಾಗಿ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಇದುವರೆಗೆ ನೂರಾರು ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ತಾಲೂಕು ಕಚೇರಿಯಲ್ಲಿ 200 ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. 2017-18 ರಿಂದ ಯಾವ ಗ್ರಾಪಂ ವ್ಯಾಪ್ತಿಯಲ್ಲೂ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕೆಂದು ಜಮೀನು ನೀಡಿರುವವರಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿತ್ತು. ಆದರೆ ಅವು ಕಳಪೆಯಾಗಿದ್ದು ಈಗಾಗಲೇ ಸೋರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯರಾದ ವಿಜಯಕುಮಾರ್, ಅನಿಲ್‌ಕುಮಾರ್, ಗಿರೀಶ್, ಜಗದೀಶ್, ದೊರೆಯಪ್ಪ, ನಿತೀಶ್, ರಂಗನಾಥ್, ಪುನೀತ್, ಹರೀಶ್ ನಾಯ್ಕ, ಅಭಿಷೇಕ್, ನಾಗೇಶ್, ರಮೇಶ್, ಮೇದಾರಪ್ಪ, ದೇವಿಕುಮಾರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net